Site icon Vistara News

PM Modi Rozgar Mela: ಯುಪಿಎ ಸರ್ಕಾರಕ್ಕಿಂತ 1.5 ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿಸಿದ್ದೇವೆ: ಪಿಎಂ ನರೇಂದ್ರ ಮೋದಿ

PM Modi Rozgar Mela

ಹೊಸದಿಲ್ಲಿ: ತಮ್ಮ ಸರ್ಕಾರ ಕಳೆದ 10 ವರ್ಷಗಳ ಅವಧಿಯಲ್ಲಿ ತಮ್ಮ ಹಿಂದಿನ ಯುಪಿಎ ಸರ್ಕಾರ ನೀಡಿದ್ದಕ್ಕಿಂತ 1.5 ಪಟ್ಟು ಹೆಚ್ಚು ಉದ್ಯೋಗಗಳನ್ನು ಯುವಜನತೆಗೆ ಒದಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ರೋಜ್‌ಗಾರ್‌ ಮೇಳ (PM Modi Rozgar Mela) ಉದ್ಘಾಟಿಸಿ ಹೇಳಿದ್ದಾರೆ.

ಇಂದು ದೇಶಾದ್ಯಂತ ನಡೆದ ರೋಜ್‌ಗಾರ್ ಮೇಳ (Rozgar Mela) ಕಾರ್ಯಕ್ರಮವೊಂದರಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ಪ್ರಧಾನಿ ಹಸ್ತಾಂತರಿಸಿದರು. ಉದ್ಯೋಗ ನೇಮಕಾತಿಗಳನ್ನು ಪೂರ್ಣಗೊಳಿಸಲು ಹಿಂದಿನ ಸರ್ಕಾರ ತುಂಬಾ ವಿಳಂಬ ಮಾಡಿದೆ ಹಾಗೂ ಲಂಚದ ರೂಢಿಯನ್ನು ಬೆಳೆಸಿದೆ ಎಂದು ಪ್ರಧಾನಿ ಆರೋಪಿಸಿದರು.

ತಮ್ಮ ಸರ್ಕಾರವು ಪಾರದರ್ಶಕತೆಯನ್ನು ತಂದಿದೆ. ನೇಮಕಾತಿಯನ್ನು ಕಾಲಮಿತಿಯಲ್ಲಿ ಮಾಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲಾಗುತ್ತಿದೆ. ಈಗ ಎಲ್ಲರಿಗೂ ಸಮಾನ ಅವಕಾಶವಿದೆ ಎಂಬುದು ಯುವಜನತೆಯ ಅರಿವಿಗೆ ಬಂದಿದೆ. ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಸರ್ಕಾರಿ ವ್ಯವಸ್ಥೆಯಲ್ಲಿ ತಮಗಾಗಿ ಸ್ಥಾನವನ್ನು ಕಂಡುಕೊಳ್ಳಬಹುದು ಎಂದು ಮೋದಿ ಹೇಳಿದರು.

ಒಂದು ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿ ಯೋಜನೆಯಾಗಿರಲಿ, ಅಥವಾ ಮೂಲಸೌಕರ್ಯದಲ್ಲಿ ಬೃಹತ್ ಹೂಡಿಕೆಯಾಗಿರಲಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳು ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. 1.25 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳೊಂದಿಗೆ, ಭಾರತವು ಈ ವಲಯದಲ್ಲಿ ಮೂರನೇ ಅತಿದೊಡ್ಡ ಉದ್ಯೋಗ ವ್ಯವಸ್ಥೆಯಾಗಿದೆ. ಯುವಜನ ಇನ್ನೂ ಸಣ್ಣ ನಗರಗಳಲ್ಲಿ ಹೊಸ ಸಂಸ್ಥೆಗಳನ್ನು ಪ್ರಾರಂಭಿಸುತ್ತಿದ್ದಾರೆ. ಇದು ಲಕ್ಷಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.

ಸರ್ಕಾರವು ಸ್ಟಾರ್ಟ್‌ಅಪ್‌ಗಳಿಗೆ ತೆರಿಗೆ ರಿಯಾಯಿತಿಗಳನ್ನು ವಿಸ್ತರಿಸಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ ₹1 ಲಕ್ಷ ಕೋಟಿ ನಿಧಿಯನ್ನು ಘೋಷಿಸಿದೆ ಎಂದರು. ಹಿಂದಿನ ಸರ್ಕಾರಗಳು ರೈಲ್ವೆಗೆ ಸರಿಯಾದ ಗಮನ ನೀಡಿಲ್ಲ. ಸಾಮಾನ್ಯ ಜನರ ನಿರೀಕ್ಷೆಗಳನ್ನು ಅವರು ನಿರ್ಲಕ್ಷಿಸಿದ್ದರು. ಆದರೆ ಈಗ ಇಡೀ ವಲಯ ಪರಿವರ್ತನೆಯ ಹಾದಿಯಲ್ಲಿದೆ. ಎಂದು ಮೋದಿ ಹೇಳಿದರು.

ಈ ಸಂದರ್ಭದಲ್ಲಿ ಅವರು ರಾಜಧಾನಿಯಲ್ಲಿ ಸಮಗ್ರ ಸಂಕೀರ್ಣ “ಕರ್ಮಯೋಗಿ ಭವನ”ದ 1ನೇ ಹಂತದ ಶಂಕುಸ್ಥಾಪನೆ ಮಾಡಿದರು. ಈ ಸಂಕೀರ್ಣವು ʼಮಿಷನ್ ಕರ್ಮಯೋಗಿ’ಯ ವಿವಿಧ ವಿಭಾಗಗಳ ನಡುವೆ ಸಹಯೋಗವನ್ನು ಉತ್ತೇಜಿಸುತ್ತದೆ.

ರೋಜ್‌ಗಾರ್‌ ಮೇಳದಲ್ಲಿ ನೇಮಕಗೊಂಡವರು ಕಂದಾಯ ಇಲಾಖೆ, ಗೃಹ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಪರಮಾಣು ಶಕ್ತಿ ಇಲಾಖೆ, ರಕ್ಷಣಾ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಸೇವೆಗೆ ಸೇರಿಕೊಳ್ಳುತ್ತಾರೆ. ಈ ಮೆಗಾ ರೋಜ್‌ಗಾರ್ ಮೇಳ ದೇಶಾದ್ಯಂತ 47 ಸ್ಥಳಗಳಲ್ಲಿ ನಡೆಯಲಿದೆ.

ರೋಜ್‌ಗಾರ್ ಮೇಳವು ದೇಶದಲ್ಲಿ ಉದ್ಯೋಗ ಸೃಷ್ಟಿಯ ಈಡೇರಿಕೆಗೆ ಸರ್ಕಾರದ ಹೆಜ್ಜೆಯಾಗಿದೆ. ಈ ಉದ್ಯೋಗ ಮೇಳಗಳು ಮತ್ತಷ್ಟು ಉದ್ಯೋಗ ಸೃಷ್ಟಿಯ ಮೂಲಕ ಯುವಜನರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ನೇರ ಭಾಗವಹಿಸುವಿಕೆಗಾಗಿ ಲಾಭದಾಯಕ ಅವಕಾಶಗಳನ್ನು ಒದಗಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಈ ಉಪಕ್ರಮವನ್ನು ಬೆಂಬಲಿಸುವ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು/UTಗಳಲ್ಲಿ ನೇಮಕಾತಿಗಳು ನಡೆಯುತ್ತಿವೆ.

ಇದನ್ನೂ ಓದಿ: Rozgar Mela: ರೋಜಗಾರ್ ಮೇಳದಡಿ 7 ಲಕ್ಷ ಯುವಕರಿಗೆ ಉದ್ಯೋಗ; ಪ್ರಲ್ಹಾದ್‌ ಜೋಶಿ

Exit mobile version