ನವದೆಹಲಿ: ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ಸುದ್ದಿ ಸಂಸ್ಥೆ ಎಎನ್ಐಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಭವಿಷ್ಯದಲ್ಲಿ ತಾವು ಉದ್ದೇಶಿಸಿರುವ ‘ದೊಡ್ಡ ಯೋಜನೆಗಳ’ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧವೂ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದಾರೆ.
#WATCH | On Congress leader Rahul Gandhi, PM Modi says, “Unfortunately, these days we see there is no commitment and responsibility towards one word. You must have seen old videos of a leader circulating, where his every thought is contradictory. When people see this, they think… pic.twitter.com/1fWhQsmLhW
— ANI (@ANI) April 15, 2024
ನಾನು ದೇಶಕ್ಕಾಗಿ ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ. ನನ್ನ ನಿರ್ಧಾರಗಳು ಯಾರನ್ನೂ ಹೆದರಿಸುವ ಅಥವಾ ಕುಗ್ಗಿಸುವ ಉದ್ದೇಶ ಹೊಂದಿಲ್ಲ. ಚುನಾವಣಾ ಬಾಂಡ್ ವಿಷಯದಲ್ಲಿ ಪ್ರತಿಪಕ್ಷಗಳು ದೇಶವನ್ನು ತಪ್ಪುದಾರಿಗೆಳೆಯುತ್ತಿವೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ರಾಮ ಮಂದಿರ ವಿಷಯವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿವೆ ಎಂದು ಅವರು ಆರೋಪಿಸಿದರು. ಇಡೀ ಸಂದರ್ಶನದಲ್ಲಿ ಅವರು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವರುಗಳಲ್ಲಿ ಪ್ರಮುಖ ಹತ್ತು ವಿಷಯಗಳನ್ನು ಇಲ್ಲಿ ನೀಡಲಾಗಿದೆ.
ಪ್ರಧಾನಿ ಮೋದಿ ಹೇಳಿದ 10 ವಿಷಯಗಳು
1) ನಾನು ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ ಎಂದು ಹೇಳುತ್ತಿದ್ದೇನೆ. ಹಾಗೆಂದು ಹೇಳಿದ ತಕ್ಷಣ ಯಾರೂ ಹೆದರಬಾರದು. ನಾನು ಯಾರನ್ನೂ ಹೆದರಿಸಲು ಅಥವಾ ಕುಗ್ಗಿಸಲು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ರಾಷ್ಟ್ರದ ಆರೋಗ್ಯಕರ ಅಭಿವೃದ್ಧಿಗಾಗಿ ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ.
2) ನಾವು ಎಲ್ಲವನ್ನೂ ಮಾಡಿದ್ದೇವೆ ಎಂದು ಎಲ್ಲ ಸರ್ಕಾರಗಳು ಹೇಳುತ್ತವೆ. ಆದರೆ ನಾನು ಎಲ್ಲವನ್ನೂ ಮಾಡಿದ್ದೇನೆ ಎಂದು ಹೇಳುವುದಿಲ್ಲ . ನಾನು ಎಲ್ಲವನ್ನೂ ಸರಿಯಾದ ದಿಕ್ಕಿನಲ್ಲಿ ಮಾಡಲು ಪ್ರಯತ್ನಿಸಿದ್ದೇನೆ ಎಂದು ಹೇಳಬಲ್ಲೆ. ಆದರೂ ನಾನು ಮಾಡಬೇಕಾದದ್ದು ಬಹಳಷ್ಟಿದೆ. ಏಕೆಂದರೆ ನನ್ನ ದೇಶಕ್ಕೆ ಅನೇಕ ಅಗತ್ಯಗಳಿವೆ ಎಂದು ನಾನು ನಂಬುತ್ತೇನೆ. ದೇಶದ ಪ್ರತಿ ಕುಟುಂಬದ ಕನಸುಗಳನ್ನು ನಾನು ಈಡೇರಿಸಬೇಕಾಗಿದೆ. ಇಷ್ಟರವರೆಗಿನ ಕೆಲಸಗಳು ಆ ಆಶಯಗಳಿಗೆ ಪೂರಕವಾಗಿರುವ ಟ್ರೈಲರ್.
3) ರಾಜಕೀಯ ನಾಯಕತ್ವವು ಪ್ರಶ್ನಾರ್ಹವಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ, ನಾವು ಪ್ರಾಣವನ್ನಾದರೂ ಒತ್ತೆ ಇಡುತ್ತೇವೆ.ಆದರೆ ವಚನ ಭ್ರಷ್ಟರಾಗುವುದಿಲ್ಲ. ರಾಜಕಾರಣಿಗಳು ಹೊಣೆಗಾರಿಕೆ ಹೊತ್ತುಕೊಳ್ಳಬೇಕು ಮತ್ತು ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ನಾನು ನಂಬುತ್ತೇನೆ.
4) 2024 ರ ಚುನಾವಣೆಯನ್ನು ನೋಡಿದರೆ, ದೇಶದ ಮುಂದೆ ಒಂದು ಬೃಹತ್ ಅವಕಾಶವಿದೆ. ಎಲ್ಲರ ಮುಂದೆ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಒಂದು ಸಿದ್ದ ಮಾದರಿ ಇದೆ. ಅವರು 5ರಿಂದ6 ದಶಕಗಗಳ ಕಾಲ ಆಡಳಿತ ಮಾಡಿದ್ದಾರೆ. ನಾನು ಕೇವಲ 10 ವರ್ಷ ಕೆಲಸ ಮಾಡಿದ್ದೇನೆ. ಎರಡೂ ಅವಧಿಗಳನ್ನು ಹೋಲಿಸಿ ನೋಡಿ. ನಾವು ಮಾಡಿರುವ ಕೆಲಸದಲ್ಲಿ ಯಾವುದೇ ನ್ಯೂನತೆಗಳು ಇಲ್ಲ ಎಂಬುದು ಸತ್ಯ.
5) ಒಂದು ರಾಷ್ಟ್ರ, ಒಂದು ಚುನಾವಣೆ ನಮ್ಮ ಬದ್ಧತೆಯಾಗಿದೆ. ದೇಶದಲ್ಲಿ ಅನೇಕ ಜನರು ದೇಶದ ವಿಷಯದಲ್ಲಿ ನಮ್ಮ ಜತೆಗಿದ್ದಾರೆ. ಅನೇಕ ಜನರು ತಮ್ಮ ಸಲಹೆಗಳನ್ನು ಇದಕ್ಕಾಗಿ ರಚಿಸಿರುವ ಸಮಿತಿಗೆ ನೀಡಿದ್ದಾರೆ. ಬಹಳ ಸಕಾರಾತ್ಮಕ ಮತ್ತು ಹೊಸಹೊಸ ಸಲಹೆಗಳು ಬಂದಿವೆ. ನಾವು ಈ ವರದಿಯನ್ನು ಜಾರಿಗೆ ತರಲು ಸಾಧ್ಯವಾದರೆ ದೇಶಕ್ಕೆ ಸಾಕಷ್ಟು ಪ್ರಯೋಜನವಾಗುತ್ತದೆ.
6) ಪ್ರತಿಪಕ್ಷಗಳು ರಾಮ ಮಂದಿರವನ್ನು ನಿರ್ಮಿಸಿದ ಬಳಿಕ ನಿಮ್ಮೆಲ್ಲರನ್ನು ಕೊಲ್ಲಾಗುತ್ತದೆ ಎಂದು ಕೆಲವರನ್ನು ಹೆದರಿಸುತ್ತಿದ್ದವು. ಇದು ವೋಟ್ ಬ್ಯಾಂಕ್ ರಾಜಕೀಯ ಎಂಬುದು ಸ್ಪಷ್ಟ. ಈಗ ಏನಾಯಿತು? ರಾಮ ಮಂದಿರವನ್ನು ನಿರ್ಮಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಹೀಗಾಗಿ ಈ ವಿಷಯವು ಪ್ರತಿಪಕ್ಷಗಳ ಕೈ ಮೀರಿದೆ.
7) ಚುನಾವಣಾ ಆಯೋಗವನ್ನು ರಚಿಸಿದರೆ ವಿರೋಧ ಪಕ್ಷವೂ ಅದರಲ್ಲಿರುತ್ತದೆ. ಈ ಹಿಂದೆ ಪ್ರಧಾನಿಯವರು ಕಡತಕ್ಕೆ ಸಹಿ ಹಾಕಿ ಚುನಾವಣಾ ಆಯೋಗ ರಚಿಸುತ್ತಿದ್ದರು. ಹೀಗಾಗಿ ಅವರ ಕುಟುಂಬಗಳಿಗೆ ಹತ್ತಿರವಿದ್ದವರು ಚುನಾವಣಾ ಆಯುಕ್ತರಾಗುತ್ತಿದ್ದರು.
ಇದನ್ನೂ ಓದಿ: PM Modi: ಚುನಾವಣಾ ಬಾಂಡ್ ರದ್ದುಪಡಿಸಿದ್ದಕ್ಕೆ ಮುಂದೊಮ್ಮೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದ ಮೋದಿ
8) ಪ್ರತಿಪಕ್ಷಗಳ ಪ್ರಣಾಳಿಕೆಯು ದೇಶದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವವರ ಆಕಾಂಕ್ಷೆ ನಾಶಪಡಿಸುತ್ತದೆ. ನೀವು ಸಂಪೂರ್ಣ ವಿಶ್ಲೇಷಣೆ ಮಾಡಿದರೆ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೆ ದೊಡ್ಡ ನಷ್ಟ. ಈ ಪ್ರಣಾಳಿಕೆ ಅವರ ಭವಿಷ್ಯವನ್ನು ಹಾಳುಗಡೆವುತ್ತದೆ.
9) ಜಾರಿ ನಿರ್ದೇಶನಾಲಯ (ಇಡಿ) ಸ್ವತಂತ್ರವಾಗಿ ಕೆಲಸ ಮಾಡಬೇಕು. ಕೆಲಸ ಮಾಡಲು ನಾವು ಬಿಡಬೇಕು. ಹಾಗಿಲ್ಲವಾದರೆ ಅದನ್ನು ಯಾಕೆ ರಚಿಸಿದ್ದು? 2014ಕ್ಕೂ ಮೊದಲು ಜಾರಿ ನಿರ್ದೇಶನಾಲಯ ಕೇವಲ 5000 ಕೋಟಿ ರೂಪಾಯಿಗಳ ಅಕ್ರಮ ಬಯಲಿಗೆ ಎಳೆದಿತ್ತು. ನನ್ನ ಅಧಿಕಾರಾವಧಿಯಲ್ಲಿ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಸೇರಿದ 1 ಲಕ್ಷ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಯಾಕೆಂದರೆ ಅದು ಜನರ ಹಣ ಹಾಗೂ ದೇಶದ ಹಣ.
10) ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ ಮೋದಿಯನ್ನು ಬೆಂಬಲಿಸುವುದು ಯಾಕೆಂದರೆ ಅವರು ಭಾರತದ ಬೆಂಬಲಿಗರಾಗಿದ್ದಕ್ಕೆ. ನಾನು ಭಾರತದಲ್ಲಿ ಹೂಡಿಕೆ ಬಯಸುತ್ತೇನೆ. ಯಾರು ಹೂಡಿಕೆ ಮಾಡಲು ಬಯಸುತ್ತಾರೋ ಅದಕ್ಕಿಲ್ಲಿ ಅವಕಾಶವಿದೆ. ಭಾರತ ನಿರ್ಮಾಣವಾಗಬೇಕಾದರೆ ಹಾಗೂ ನನ್ನ ದೇಶದ ಯುವಕರಿಗೆ ಉದ್ಯೋಗ ಸಿಗಬೇಕಾದರೆ ಅದು ಅಗತ್ಯ ಎಂದು ಹೇಳಿದರು.