ನವದೆಹಲಿ: ತೆಲಂಗಾಣದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತೆಲಂಗಾಣ ಬಿಜೆಪಿ ಮುಖಂಡರನ್ನು ಭೇಟಿಯಾಗಲಿದ್ದಾರೆ. ಇತ್ತೀಚೆಗೆ ಐಎಸ್‌ಬಿ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಹೈದರಾಬಾದ್‌ಗೆ ಪ್ರಧಾನಿ ಆಗಮಿಸಿದ್ದಾಗ ಅವರನ್ನು ಬಿಜೆಪಿ ನಾಯಕರು ಭೇಟಿಯಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಶೇಷ ಆಹ್ವಾನ ನೀಡಲಾಗಿದೆ.
ಮಂಗಳವಾರ ಸಂಜೆ ಪ್ರಧಾನಿ ಹೈದರಾಬಾದ್ ಪಾಲಿಕೆ(ಜಿಎಚ್‌ಎಂಸಿ) 47 ಕಾರ್ಪೋರೇಟರ್‌ಗಳು ಹಾಗೂ ಪಕ್ಷದ ಸ್ಥಳೀಯ ಪದಾಧಿಕಾರಿಗಳು ಹಾಗೂ ಮುಖಂಡರನ್ನು ಭೇಟಿಯಾಗಲಿದ್ದಾರೆ. ಇವರ ಜತೆಗೆ ಸಚಿವ ಕಿಶನ್ ರೆಡ್ಡಿ, ರಾಜ್ಯ ಅಧ್ಯಕ್ಷ ಬಂಡಿ ಸಂಜಯ್, ರಾಜ್ಯಸಭೆ ಸದಸ್ಯ ಕೆ.ಲಕ್ಷ್ಮಣ್, ಸಂಸದರು ಹಾಜರಿರಲಿದ್ದಾರೆ.
ಇದನ್ನೂ ಓದಿ | ವಿಜಯದಶಮಿ ಹೊತ್ತಿಗೆ BJPಗೆ ಪರ್ಯಾಯ ಶಕ್ತಿ: ದೇವೇಗೌಡರ ಜತೆ ತೆಲಂಗಾಣ ಸಿಎಂ ಮಾತುಕತೆ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷ 119 ಸ್ಥಾನಗಳ ಪೈಕಿ 88 ಸ್ಥಾನ (ಶೇ.49 ಮತ) ಪಡೆದು ರಾಜ್ಯದಲ್ಲಿ ಅಧಿಕಾರಕ್ಕೇರಿತ್ತು. ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಪಡೆಯಲು ಸಾಧ್ಯವಾಗಿತ್ತು, ಆದರೆ ಕಮಲ ಪಕ್ಷ ಗ್ರೇಟರ್ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಹೀಗಾಗಿ ಬಿಜೆಪಿ ಮುಖಂಡರಲ್ಲಿ ಆತ್ಮಸ್ಥೈರ್ಯ ತುಂಬಲು ರಾಜ್ಯದ ನಾಯಕರನ್ನು ಆಹ್ವಾನಿಸಿದ್ದಾರೆ.
ಈ ಬಗ್ಗೆ ಜಿಎಚ್‌ಎಂಸಿ ಮುರ್ಷಿದಾಬಾದ್ ವಾರ್ಡ್ ಸದಸ್ಯೆ ಸುಪ್ರಿಯಾ ಗೌಡ ಮಾತನಾಡಿ, ಕಾರ್ಪೋರೇಟರ್‌ಗಳನ್ನು ಭೇಟಿ ಮಾಡಲು ಪ್ರಧಾನಿ ಆಹ್ವಾನ ನೀಡಿರುವುದು ಸಂತಸದ ವಿಷಯ. ಪಕ್ಷದ ಜಿಎಚ್‌ಎಂಸಿ ವಾರ್ಡ್ ಸದಸ್ಯರು ಹಾಗೂ ಮುಖಂಡರು ದೆಹಲಿಯಲ್ಲಿ ಪ್ರಧಾನಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ. ಚುನಾವಣೆಯಲ್ಲಿ ನಾವು ಎದುರಿಸಿದ ಸವಾಲುಗಳ ಬಗ್ಗೆ ಪ್ರಧಾನಿ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಸಾಲಕ್ಕೀಗ ಸುಲಭ ವೇದಿಕೆ: ಜನ ಸಮರ್ಥ್ ಪೋರ್ಟಲ್ ತೆರೆದಿಟ್ಟ ಪ್ರಧಾನಿ ಮೋದಿ