Site icon Vistara News

PM Modi US Visit: ನರೇಂದ್ರ ಮೋದಿಗೆ ಜೋ ಬೈಡೆನ್‌ ಟಿ-ಶರ್ಟ್‌ ಗಿಫ್ಟ್;‌ ಅದರಲ್ಲಿ ಬರೆದಿದ್ದೇನು?

biden gift to modi

ವಾಷಿಂಗ್ಟನ್‌: ಅಮೆರಿಕ ಭೇಟಿಯ (PM Modi US Visit) ಕೊನೆಯ ದಿನವಾದ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ (Joe Biden) ಅವರು ವಿಶೇಷ ಟಿ-ಶರ್ಟ್‌ ಉಡುಗೊರೆ ನೀಡಿದರು.

ಈ ಟಿ-ಶರ್ಟ್‌ನಲ್ಲಿ ʼದಿ ಫ್ಯೂಚರ್‌ ಈಸ್‌ ಎಐʼ (The Future is AI) ಎಂದು ಬರೆದಿದೆ. ಅದರ ಕೆಳಗಡೆ ʼAmerica & Indiaʼ ಎಂದು ಕೂಡ ಬರೆಯಲಾಗಿದೆ. ಮೋದಿಯವರು ಗುರುವಾರ US ಕಾಂಗ್ರೆಸ್‌ನಲ್ಲಿ ಮಾಡಿದ ಭಾಷಣದಲ್ಲಿ ಇದನ್ನು ಉಲ್ಲೇಖಿಸಿದ್ದರು. “ಕಳೆದ ಕೆಲವು ವರ್ಷಗಳಲ್ಲಿ, ಕೃತಕ ಬುದ್ಧಿಮತ್ತೆಯಲ್ಲಿ (AI) ಅನೇಕ ಪ್ರಗತಿಗಳು ಆಗಿವೆ. ಅದೇ ಸಮಯದಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆ ಆಗಿರುವ ಮತ್ತೊಂದು ಸಹಭಾಗಿತ್ವ ಎಂದರೆ AI- ಅಮೆರಿಕ ಮತ್ತು ಭಾರತʼʼ ಎಂದಿದ್ದರು. ಈಗ ಅದನ್ನೇ ಬರೆಸಿದ ಟಿ-ಶರ್ಟನ್ನು ಬೈಡೆನ್‌ ಮೋದಿಯವರಿಗೆ ಕೊಡಮಾಡಿದ್ದಾರೆ.

ಶುಕ್ರವಾರ ನಡೆದ ಭಾರತ- ಅಮೆರಿಕ ಹೈಟೆಕ್‌ ಸಮ್ಮಿಲನದಲ್ಲಿ ಪ್ರಧಾನಿ ಮೋದಿ, ಯುಎಸ್ ಅಧ್ಯಕ್ಷ ಬೈಡೆನ್ ಜತೆಗೆ ತಂತ್ರಜ್ಞಾನ ಕ್ಷೇತ್ರದ ದೈತ್ಯರಾದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ, ಆಪಲ್ ಸಿಇಒ ಟಿಮ್ ಕುಕ್, ಓಪನ್ ಎಐ ಮುಖ್ಯಸ್ಥ ಸ್ಯಾಮ್ ಆಲ್ಟ್‌ಮನ್, ಎಎಂಡಿ ಸಿಇಒ ಲಿಸಾ ಸು, ಪ್ಲಾನೆಟ್ ಲ್ಯಾಬ್ಸ್ ಸಿಇಒ ವಿಲ್ ಮಾರ್ಷಲ್, ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸೇರಿದಂತೆ ಹಲವು ಉದ್ಯಮಿಗಳು, ತಂತ್ರಜ್ಞಾನ ಕ್ಷೇತ್ರದ ಧೀಮಂತರು ಹಾಜರಿದ್ದರು.

ಹೈಟೆಕ್ ಹ್ಯಾಂಡ್‌ಶೇಕ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಪ್ರತಿಭೆ ಮತ್ತು ತಂತ್ರಜ್ಞಾನದ ಒಗ್ಗೂಡುವಿಕೆಯಿಂದ ಉಭಯ ದೇಶಗಳ ಉಜ್ವಲ ಭವಿಷ್ಯ ಸಾಧ್ಯವಾಗಲಿದೆʼʼ ಎಂದರು. ʼʼಭಾರತ ಮತ್ತು ಯುಎಸ್ ನಡುವಿನ ಸಹಕಾರವು ಎರಡೂ ದೇಶಗಳ ಜನರಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸಂಬಂಧಿಸಿದೆ. ನಮ್ಮ ಪಾಲುದಾರಿಕೆಯು ಹವಾಮಾನ ಬದಲಾವಣೆಯನ್ನು ನಿಭಾಯಿಸುವುದು, ಬ್ರಹ್ಮಾಂಡವನ್ನು ಅನ್ವೇಷಿಸುವುದು, ಜನರನ್ನು ಬಡತನದಿಂದ ಮೇಲೆತ್ತುವುದು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಮುಂತಾದ ಕ್ಷೇತ್ರಗಳಿಗೂ ವ್ಯಾಪಿಸಿದೆʼʼ ಎಂದು ಅಮೆರಿಕ ಅಧ್ಯಕ್ಷ ಬೈಡೆನ್‌ ನುಡಿದರು.

ಇದನ್ನೂ ಓದಿ: PM Modi US Visit: ʼಅಮೆರಿಕದಲ್ಲಿ ಮಿನಿ ಭಾರತ…ʼ: ಮೋದಿ ವಿದಾಯ ಭಾಷಣ

Exit mobile version