ನ್ಯೂಯಾರ್ಕ್: ʼʼನಾನು ಭಾರತೀಯನಾಗಿ ಜನಿಸಿದ್ದಕ್ಕೆ ಹೆಮ್ಮೆ ಪಡುವಂತೆ ಪ್ರಧಾನಿ ಮೋದಿ ನಡೆದುಕೊಂಡರುʼʼ ಇದು ಅಮೆರಿಕದ ಖ್ಯಾತ ಅಕಾಡೆಮಿಶಿಯನ್, ಕೃಷಿ ವಿಜ್ಞಾನಿ ಪ್ರೊಫೆಸರ್ ರತ್ತನ್ ಲಾಲ್ ಅವರ ಮಾತಾಗಿತ್ತು.
ತಮ್ಮ ಐತಿಹಾಸಿಕ ಅಮೆರಿಕ ಭೇಟಿಯ (PM Modi US Visit) ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳ ನಡುವಿನ ಸಹಯೋಗವನ್ನು ಸುಧಾರಿಸುವ ಕುರಿತು ಚರ್ಚಿಸಲು ಅಮೆರಿಕದ ಹಲವು ಖ್ಯಾತ ಶಿಕ್ಷಣ ತಜ್ಞರು ಮತ್ತು ಆರೋಗ್ಯ ತಜ್ಞರನ್ನು ಭೇಟಿ ಮಾಡಿದರು. ಭೇಟಿಯ ಬಳಿಕ ರತನ್ ಲಾಲ್ ಮಾತನಾಡಿ, ʼʼಹವಾಮಾನ ಬದಲಾವಣೆಗೆ ಕೃಷಿ ಹೇಗೆ ಪರಿಹಾರ ಎಂಬುದರ ಕುರಿತು ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅದೊಂದು ಅತ್ಯುತ್ತಮ ಭೇಟಿ ಆಗಿತ್ತು. ನಾವು ಭಾರತೀಯರಾಗಿರುವುದಕ್ಕೆ ನಮಗೆ ತುಂಬಾ ಹೆಮ್ಮೆ ತಂದಿದ್ದಾರೆ ಪ್ರಧಾನಿ ಮೋದಿ. ಅವರ ನೀತಿಯ ಮೂಲಕ ಭಾರತಕ್ಕೆ ಸೇವೆ ಸಲ್ಲಿಸಲು ನಮಗೆ ಅವಕಾಶ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಪ್ರೊ. ಲಾಲ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಗುಂಪಿನಲ್ಲಿ ಪ್ರೊ.ಲಾಲ್ ಅವರಲ್ಲದೆ ಡಾ.ನೀಲಿ ಬೆಂಡಪುಡಿ, ಡಾ.ಪ್ರದೀಪ್ ಖೋಸ್ಲಾ, ಡಾ.ಸತೀಶ್ ತ್ರಿಪಾಠಿ, ಎಂ.ಎಸ್ ಚಂದ್ರಿಕಾ ಟಂಡನ್, ಪ್ರೊ.ಜಗಮೋಹನ್ ರಾಜು, ಡಾ.ಮಾಧವ್ ವಿ. ರಾಜನ್ ಮತ್ತು ಡಾ.ಅನುರಾಗ್ ಮೈರಾಲ್ ಇದ್ದರು.
ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಡಾ. ಪೀಟರ್ ಅಗ್ರೆ, ಡಾ. ಲಾಟನ್ ರಾಬರ್ಟ್ ಬರ್ನ್ಸ್, ಡಾ. ಸ್ಟೀಫನ್ ಕ್ಲಾಸ್ಕೊ, ಡಾ. ಪೀಟರ್ ಹೊಟೆಜ್, ಡಾ. ಸುನಿಲ್ ಎ. ಡೇವಿಡ್ ಮತ್ತು ಡಾ. ವಿವಿಯನ್ ಎಸ್. ಲೀ ಸೇರಿದಂತೆ ಹಲವು ಆರೋಗ್ಯ ತಜ್ಞರ ಗುಂಪಿನೊಂದಿಗೆ ಪಿಎಂ ಮೋದಿ ಸಭೆ ನಡೆಸಿದರು. ಅದರಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ ಕುರಿತು ಚರ್ಚಿಸಲಾಯಿತು.
ಯುಎಸ್‌ನಲ್ಲಿ ಪಿಎಂ ಮೋದಿ ಅವರ ಭೇಟಿಯ ಮೊದಲ ದಿನದ ಪ್ರಮುಖ ಮೀಟಿಂಗ್‌ಗಳಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಜತೆಗಿನ ಭೇಟಿ ಒಂದಾಗಿತ್ತು. ಟೆಸ್ಲಾ ಮತ್ತು ಸ್ಟಾರ್‌ಲಿಂಕ್‌ಗಳ ಭಾರತಕ್ಕೆ ಬರುವ ಯೋಜನೆಯನ್ನು ಮಸ್ಕ್ ಆ ಬಳಿಕ ಘೋಷಿಸಿದರು. ಅವರು ತನ್ನನ್ನು ʼಪಿಎಂ ಮೋದಿ ಅಭಿಮಾನಿ’ ಎಂದು ಕರೆದುಕೊಂಡರಲ್ಲದೆ, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದರು.
ಖ್ಯಾತ ಖಗೋಳ ಭೌತಶಾಸ್ತ್ರಜ್ಞ ನೀಲ್ ಡಿಗ್ರಾಸ್ ಟೈಸನ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾದರು. ʼʼಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಯಾವುದೇ ಮಿತಿಗಳಿಲ್ಲ. ನಿಸ್ಸಂಶಯವಾಗಿ ಪ್ರಧಾನಿ ಬಾಹ್ಯಾಕಾಶದ ಕುರಿತು ಮಾತಾಡಲು ನನಗಾಗಿ ಕಾದಿದ್ದರು. ಅವರಿಗೆ ಆ ವಿಚಾರ ಇಷ್ಟವೆಂದು ನನಗೆ ಸ್ಪಷ್ಟವಾಯಿತು. ನಾನು ಅದನ್ನು ಕೇಳಿ ಸಂತೋಷಪಟ್ಟೆ. ಭವಿಷ್ಯದ ಯೋಜನೆಗಳನ್ನು ಅವರು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ಭಾರತದ ಸಾಧನೆಯ ಸಾಮರ್ಥ್ಯಕ್ಕೆ ಮಿತಿಯಿಲ್ಲ ಎಂದು ಹೇಳುವವರಲ್ಲಿ ನಾನು ಒಬ್ಬಂಟಿಯಲ್ಲʼʼ ಎಂದು ಟೈಸನ್ ಬಳಿಕ ಹೇಳಿದರು.
ಇದನ್ನೂ ಓದಿ: PM Modi US Visit: ನಾನು ಮೋದಿ ಫ್ಯಾನ್, ಅವರು ಭಾರತಕ್ಕೆ ಒಳಿತು ಮಾಡಲಿದ್ದಾರೆ: ಎಲಾನ್ ಮಸ್ಕ್