ವಾಷಿಂಗ್ಟನ್: ಇಂದು ಭಾರತೀಯ ಅಮೆರಿಕನ್ನರು, ವಲಸಿಗರ ಡಯಾಸ್ಪೊರಾ ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ವಿದಾಯ ಭಾಷಣ ಮಾಡುವ ಮೂಲಕ ತಮ್ಮ ಅಮೆರಿಕ ಭೇಟಿಗೆ (PM Modi US Visit) ಮುಕ್ತಾಯ ಹಾಡಿದರು.
ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ಭವನ ಮತ್ತು ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್‌ನಲ್ಲಿ ಭಾರತದಿಂದ ತೆರಳಿದ ವಲಸಿಗರ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಅವರ ಬಹು ನಿರೀಕ್ಷಿತ ಭಾಷಣಕ್ಕೂ ಮುನ್ನ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಮೇರಿ ಮಿಲ್‌ಬೆನ್ ಭಾರತದ ರಾಷ್ಟ್ರಗೀತೆಯನ್ನು ಹಾಡಿದರು. ಯುಎಸ್ ಐತಿಹಾಸಿಕ ಭೇಟಿಯ (PM Modi US Visit) ನಂತರ ಮೋದಿ ತಮ್ಮ ವಿದಾಯ ಭಾಷಣ ಮಾಡಲು ಆಗಮಿಸುತ್ತಿದ್ದಂತೆ ಸಭಾಂಗಣದಲ್ಲಿ ʼಭಾರತ್ ಮಾತಾ ಕಿ ಜೈ’ ಮತ್ತು ʼವಂದೇ ಮಾತರಂ’ ಘೋಷಣೆಗಳು ಪ್ರತಿಧ್ವನಿಸಿದವು.
ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಸಮುದಾಯಕ್ಕೆ ಮೋದಿ ಧನ್ಯವಾದ ಅರ್ಪಿಸಿದರು. “ಒಂದು ರೀತಿಯಲ್ಲಿ, ನೀವು ಈ ಸಭಾಂಗಣದಲ್ಲಿ ಭಾರತದ ಸಂಪೂರ್ಣ ನಕ್ಷೆಯನ್ನು ತಂದಿದ್ದೀರಿ. ನಾನು ಇಲ್ಲಿ ಭಾರತದ ಮೂಲೆ ಮೂಲೆಗಳಿಂದ ಬಂದ ಜನರನ್ನು ನೋಡುತ್ತಿದ್ದೇನೆ. ಮಿನಿ ಭಾರತವೊಂದು ಇಲ್ಲಿ ಕಂಡುಬರುತ್ತಿದೆ. ನಾನು ಅಮೇರಿಕದಲ್ಲಿ ಅಭೂತಪೂರ್ವ ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆದಿದ್ದೇನೆʼʼ ಎಂದು ಮೋದಿ ನೆನೆದರು.
ʼʼಯುಎಸ್ ಅಧ್ಯಕ್ಷ ಜೋ ಬೈಡನ್ ಅನುಭವಿ ರಾಜಕಾರಣಿ. ಅವರು ಯಾವಾಗಲೂ ಭಾರತ-ಯುಎಸ್ ಪಾಲುದಾರಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ. ಅಮೆರಿಕದಲ್ಲಿ ʼಏಕ ಭಾರತ, ಶ್ರೇಷ್ಠ ಭಾರತ’ದ ಸುಂದರವಾದ ಚಿತ್ರವನ್ನು ತೋರಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ಜಾಗತಿಕ ಕಾರ್ಯತಂತ್ರ, ತಂತ್ರಜ್ಞಾನ ವರ್ಗಾವಣೆ, ಉತ್ಪಾದನಾ ಸಹಕಾರ ಇತ್ಯಾದಿಗಳನ್ನು ಸುಗಮಗೊಳಿಸುವ ಮೂಲಕ ಭಾರತ-ಯುಎಸ್ ಸಂಬಂಧ ಅದ್ಭುತವಾದ ಹೊಸ ಪ್ರಯಾಣವನ್ನು ಪ್ರಾರಂಭಿಸಿದೆ. ನಮ್ಮ ಸಂಬಂಧಕ್ಕೆ ಆಕಾಶವೂ ಕೂಡ ಮಿತಿಯಲ್ಲ.ʼʼ ಎಂದು ಮೋದಿ ನುಡಿದರು.
ಭಾರತೀಯ ವಾಯುಸೈನ್ಯಕ್ಕಾಗಿ ಯುದ್ಧ ವಿಮಾನಗಳನ್ನು ತಯಾರಿಸುವ ಜನರಲ್ ಎಲೆಕ್ಟ್ರಿಕ್ ಏರೋಸ್ಪೇಸ್- ಎಚ್‌ಎಎಲ್ ಒಪ್ಪಂದ ಭಾರತದ ರಕ್ಷಣಾ ವಲಯಕ್ಕೆ ಒಂದು ಮೈಲಿಗಲ್ಲು. ಆರ್ಟೆಮಿಸ್ ಒಪ್ಪಂದವು ಬಾಹ್ಯಾಕಾಶ ಪರಿಶೋಧನೆಯಲ್ಲಿ ಹಲವಾರು ಅವಕಾಶಗಳನ್ನು ಒದಗಿಸಲಿದೆ. ಗೂಗಲ್ ಮೈಕ್ರಾನ್, ಅಪ್ಲೈಡ್ ಮೆಟೀರಿಯಲ್ಸ್‌ನಂತಹ ಕಂಪನಿಗಳ ಬೃಹತ್ ಹೂಡಿಕೆ ಪ್ರಕಟಣೆಗಳು ʼಮೇಕ್ ಇನ್ ಇಂಡಿಯಾ’ವನ್ನು ಉತ್ತೇಜಿಸಲಿವೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಎಂದರು.
ಅಮೆರಿಕದ ಹೊಸ ಕಾನ್ಸುಲೇಟ್‌ಗಳನ್ನು ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ತೆರೆಯಲು ಅಮೆರಿಕ ನಿರ್ಧರಿಸಿದೆ ಎಂಬ ಮೋದಿಯವರ ಘೋಷಣೆಗೆ ಡಯಾಸ್ಪರಾ ಸ್ಟಾಂಡಿಂಗ್ ಒವೇಷನ್ (ಎದ್ದು ನಿಂತು ಚಪ್ಪಾಳೆ ತಟ್ಟಿ) ಗೌರವ ಸೂಚಿಸಿತು. H-1B ವೀಸಾಗಳನ್ನು ಭಾರತೀಯರು ಪಡೆಯುವ ಹಾಗೂ ನವೀಕರಿಸುವ ಪ್ರಕ್ರಿಯೆ ಸುಲಭವಾಗಲಿದೆ ಎಂದು ಅವರು ಪುನರುಚ್ಚರಿಸಿದರು.
ಭಾರತದ ಡಿಜಿಟಲ್ ಕ್ರಾಂತಿಯನ್ನು ಉಲ್ಲೇಖಿಸಿದ ಮೋದಿ, ದೇಶದ ʼಪ್ರಚಂಡ ಪ್ರಗತಿ’ಗೆ 140 ಕೋಟಿ ಜನರ ನಂಬಿಕೆ ಕಾರಣವಾಗಿದೆ. ನೂರಾರು ವರ್ಷಗಳ ವಸಾಹತುಶಾಹಿ ಈ ನಂಬಿಕೆಯನ್ನು ನಮ್ಮಿಂದ ದೂರ ಮಾಡಿತ್ತು ಎಂದರು. ಭಾರತದಿಂದ ಕದಿಯಲಾಗಿದ್ದ 100ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸುವ ನಿರ್ಧಾರಕ್ಕಾಗಿ ಅವರು ಅಮೆರಿಕನ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ʼʼಭಾರತದಲ್ಲಿ ಹೂಡಿಕೆ ಮಾಡಲು ಇದು ಅತ್ಯುತ್ತಮ ಸಮಯ. ಭಾರತ ಪ್ರಜಾಪ್ರಭುತ್ವದ ತಾಯಿ. ಅಮೆರಿಕ ಪ್ರಜಾಪ್ರಭುತ್ವದ ಚಾಂಪಿಯನ್. ಅದು ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ರಫ್ತು ತಾಣ ಸಹಭಾಗಿ. ನಮ್ಮ ದ್ವಿಪಕ್ಷೀಯ ಸಂಬಂಧದ ನಿಜವಾದ ಸಾಮರ್ಥ್ಯ ಇನ್ನೂ ಹೊರಬರಬೇಕಿದೆ. 21ನೇ ಶತಮಾನದಲ್ಲಿ ಭಾರತ-ಅಮೆರಿಕ ಪಾಲುದಾರಿಕೆ ಲಾಭದಾಯಕವಾಗಲಿದೆ. ಈ ಪಾಲುದಾರಿಕೆಯಲ್ಲಿ ನೀವೆಲ್ಲರೂ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದೀರಿ. ನಿಮ್ಮೆಲ್ಲರ ಭೇಟಿ ನನಗೆ ಊಟದ ನಂತರ ಸಿಹಿ ಖಾದ್ಯವನ್ನು ಸೇವಿಸಿದಂತಿದೆ” ಎಂದು ಮೋದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಇದನ್ನೂ ಓದಿ: PM Modi US visit : ಶ್ವೇತಭವನದ ಔತಣಕೂಟದಲ್ಲಿ ಮಿಂಚಿದ ಮುಕೇಶ್, ನೀತಾ ಅಂಬಾನಿ, ನಿಖಿಲ್ ಕಾಮತ್