ವಾಷಿಂಗ್ಟನ್: ಯುಎಸ್ ಕಾಂಗ್ರೆಸ್‌ನ ಜಂಟಿ ಸಭೆಯನ್ನುದ್ದೇಶಿಸಿ (PM Modi US Visit) ಮಾಡಿದ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅಮೆರಿಕದಲ್ಲಿರುವ ಭಾರತೀಯ ಮೂಲದ ಲಕ್ಷಾಂತರ ವ್ಯಕ್ತಿಗಳ ಸಾಧನೆಯನ್ನು ನೆನೆದರು. ವಿಶೇಷವಾಗಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಅವರ ಬಗ್ಗೆ ಮೋದಿ ಆಡಿದ ಮಾತು, ಸದನದಲ್ಲಿದ್ದವರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ (standing ovation) ಮಾಡಿತು.
ʼʼಅಮೆರಿಕದಲ್ಲಿರುವ ಲಕ್ಷಾಂತರ ಜನರು ಭಾರತದಲ್ಲಿ ಬೇರುಗಳನ್ನು ಹೊಂದಿದ್ದಾರೆ. ಮತ್ತು ಅವರಲ್ಲಿ ಕೆಲವರು ಈ ಸನದದಲ್ಲಿ ಕುಳಿತಿದ್ದಾರೆ. ಅವರಲ್ಲಿ ಒಬ್ಬರು ನನ್ನ ಹಿಂದೆ ಕುಳಿತವರುʼʼ ಎಂದು ಮೋದಿ ತಮ್ಮ ಹಿಂದೆ ಕುಳಿತಿದ್ದ ಕಮಲಾ ಹ್ಯಾರಿಸ್ ಅವರನ್ನು ತೋರಿಸಿದರು. ʼʼಅವರು ಇತಿಹಾಸ ನಿರ್ಮಿಸಿದ್ದಾರೆ. ʼಸಮೋಸಾ ಕಾಕಸ್ʼ (samosa caucus) ಈಗ ಸದನದ ಫ್ಲೇವರ್ ಆಗಿದೆ ಎಂದು ನನಗೆ ಮಾಹಿತಿ ನೀಡಲಾಗಿದೆ. ಈ ಸಂಬಂದ ಇನ್ನಷ್ಟು ಬೆಳೆಯಲಿದೆ ಹಾಗೂ ಭಾರತೀಯ ಪಾಕಪದ್ಧತಿಯ ಸಂಪೂರ್ಣ ವೈವಿಧ್ಯತೆಯನ್ನು ಇಲ್ಲಿ ತರಲಿದೆ ಎಂಬುದು ನನ್ನ ವಿಶ್ವಾಸ ಎಂದು ಪ್ರಧಾನಿ ಮೋದಿ ನುಡಿದರು.
ಈ ಮಾತಿಗೆ ಸದನ ಸದಸ್ಯರಿಂದ ನಗು ಹಾಗೂ ಎದ್ದು ನಿಂತು ಚಪ್ಪಾಳೆಯ ಶ್ಲಾಘನೆ ವ್ಯಕ್ತವಾಯಿತು. ಸ್ವತಃ ಕಮಲಾ ಹ್ಯಾರಿಸ್ ಜೋರಾಗಿ ನಕ್ಕು ಎದ್ದು ನಿಂತು ಈ ಮಾತಿಗೆ ಮೆಚ್ಚುಗೆ ಸೂಚಿಸಿದರು.
ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಭಾರತದ ಚೆನ್ನೈನಲ್ಲಿ ಜನಿಸಿದವರು. ಆಕೆಯ ತಾಯಿ 1960ರ ದಶಕದಲ್ಲಿ ಅಮೆರಿಕಕ್ಕೆ ತೆರಳಿದ್ದರು. ಜಮೈಕಾ ಮೂಲದ ಡೊನಾಲ್ಡ್ J. ಹ್ಯಾರಿಸ್ ಅವರನ್ನು ವಿವಾಹವಾಗಿದ್ದರು. ಹ್ಯಾರಿಸ್ ಆಗಾಗ ತಮ್ಮ ಭಾರತೀಯ ಮೂಲದ ಬಗ್ಗೆ ಮಾತನಾಡುತ್ತಾರೆ ಮತ್ತು ಇಂದಿಗೂ ಸಂಪರ್ಕ ಉಳಿಸಿಕೊಂಡಿದ್ದಾರೆ. 2020ರಲ್ಲಿ ಯುಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಇವರು ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ, ಮೊದಲ ಆಫ್ರಿಕನ್-ಅಮೇರಿಕನ್ ಮಹಿಳೆ ಮತ್ತು ಮೊದಲ ಭಾರತೀಯ ಮೂಲದ ಮೊದಲ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ಸಮೋಸಾ ಕಾಕಸ್ ಎಂದರೇನು?
ಸಮೋಸಾ ಭಾರತದ ಜನಪ್ರಿಯ ಆಹಾರಗಳಲ್ಲೊಂದು. ಭಾರತದಿಂದ ಹೋದವರು ಅದನ್ನು ಅಮೆರಿಕದಲ್ಲೂ ಜನಪ್ರಿಯಗೊಳಿಸಿದ್ದಾರೆ. ಅಮೆರಿಕ ಕಾಂಗ್ರೆಸ್‌ನಲ್ಲಿರುವ ದಕ್ಷಿಣ ಏಷ್ಯಾ ಮೂಲದ, ವಿಶೇಷವಾಗಿ ಭಾರತೀಯ ಉಪಖಂಡ ಮೂಲದ ಚುನಾಯಿತ ಪ್ರತಿನಿಧಿಗಳ ಗುಂಪಿಗೆ ʼಸಮೋಸಾ ಕಾಕಸ್ʼ ಎಂಬ ಪದ ಬಳಸಲಾಗುತ್ತದೆ.
ಇದನ್ನೂ ಓದಿ: PM Modi US Visit: ‘ಭಾರತವು ಪ್ರಜಾಪ್ರಭುತ್ವದ ತಾಯಿ’ ಎಂದ ಮೋದಿ; ಯುಎಸ್ ಜಂಟಿ ಸದನದಲ್ಲಿ 2ನೇ ಬಾರಿ ಐತಿಹಾಸಿಕ ಭಾಷಣ