Site icon Vistara News

ಮೋದಿ ತಾಯಿ ಶತಾಯುಷಿ; ಗುಜರಾತ್‌ ರಸ್ತೆಗೆ ಅವರದೇ ಹೆಸರು

ಮೋದಿ

ಗಾಂಧಿ ನಗರ:‌ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಮೋದಿ ಅವರು ಇದೇ ಜೂನ್‌ 18ಕ್ಕೆ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಮೂಲಕ ಅವರು ಶತಾಯಷಿ ಎನಿಸಿಕೊಳ್ಳಲಿದ್ದು, ಹುಟ್ಟು ಹಬ್ಬ ಆಚರಣೆಯ ದಿನದಂದು ಅವರನ್ನು ಮೋದಿ ಭೇಟಿಯಾಗಲಿದ್ದಾರೆ.

ಹೀರಾಬೆನ್‌ ಅವರು ಜೂನ್‌ 18, 1923ರಲ್ಲಿ ಜನಿಸಿದರು. ಸದ್ಯ ಅವರು ಗಾಂಧಿನಗರ ಹೊರವಲಯದಲ್ಲಿರುವ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪಂಕಜ್‌ ಮೋದಿ ಅವರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನು ಮೆಹ್ಸಾನಾ ಜಿಲ್ಲೆಯ ವಡ್ನಗರದ ಹಟಕೇಶ್ವರ ದೇವಾಲಯದಲ್ಲಿ ಹೀರಾಬೆನ್‌ ಅವರ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ನರೇಂದ್ರ ಮೋದಿ ಅವರು ತಮ್ಮ ತಾಯಿಯನ್ನು ಭೇಟಿಯಾಗಿದ್ದರು. ಇದೀಗ ಜೂನ್‌ 18ರಂದು ಅವರು ಗುಜರಾತ್‌ಗೆ ಒಂದು ದಿನ ಭೇಟಿ ನೀಡಲಿದ್ದು, ಪಾವಗಡ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ
ವಡೋದರದಲ್ಲಿ ನಾಲ್ಕು ಲಕ್ಷ ಜನ ಭಾಗವಹಿಸುವ ಬಹಿರಂಗ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಂದು ಅಹಮದಾಬಾದ್‌ನ ಜಗನ್ನಾಥ ದೇವಾಲಯದಲ್ಲಿ ಮೋದಿ ಕುಟುಂಬದಿಂದ ಭಂಡಾರೊ (ಸಮುದಾಯ ಭೋಜನ) ಆಯೋಜಿಸಲಾಗಿದೆ.

ಮೋದಿ ಅವರ ತಾಯಿ ವಾಸವಿರುವ ಮನೆ ಇರುವ ರಾಯ್ಸನ್ ಗ್ರಾಮ ಬಿಜೆಪಿ ಆಡಳಿತದ ಗಾಂಧಿನಗರ ಪಾಲಿಕೆ ವ್ಯಾಪ್ತಿಯಲ್ಲಿದೆ. ಪ್ರಧಾನಿ ಅವರ ತಾಯಿ 100ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ನಾವು ಅವರ ಜೀವನದಿಂದ ಸ್ಫೂರ್ತಿ ಪಡೆಯಲು ರಾಯ್ಸನ್‌ ಪ್ರದೇಶದ 80 ಮೀಟರ್‌ ರಸ್ತೆಗೆ ಪೂಜ್ಯ ಹಿರಾಬಾ ಮಾರ್ಗ ಎಂದು ಬುಧವಾರ ಹೆಸರಿಡಲಾಗಿದೆ ಎಂದು ಗಾಂಧಿನಗರ ಪಾಲಿಕೆ ಮೇಯರ್‌ ಹಿತೇಶ್‌ ಮಕ್ವಾನಾ ತಿಳಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರಿನಲ್ಲಿ ಜೂ.20ರಂದು ಮೋದಿ ರೋಡ್‌ ಶೋ; ಅಭೂತಪೂರ್ವ ಸ್ವಾಗತಕ್ಕೆ ಸಿಎಂ ಸೂಚನೆ

Exit mobile version