ನವದೆಹಲಿ: ಮಾರ್ನಿಂಗ್ ಕನ್ಸಲ್ಟ್ (Morning Consult) ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮತ್ತೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಶೇ.76 ಅಪ್ರೂವಲ್ ರೇಟಿಂಗ್‌ನೊಂದಿಗೆ ಇತರ ಎಲ್ಲ ನಾಯಕರನ್ನು ಹಿಂದಿಕ್ಕಿ ಮುಂದೆ ಇದ್ದಾರೆ. ಹೀಗಿದ್ದೂ, ಫೆಬ್ರವರಿ ರೇಟಿಂಗ್‌ಗೆ ಹೋಲಿಸಿದರ ಶೇ.2ರಷ್ಟು ಕಡಿಮೆಯಾಗಿದೆ. ಫೆಬ್ರವರಿ ತಿಂಗಳಲ್ಲಿ ಶೇ.78ರಷ್ಟು ರೇಟಿಂಗ್ ಹೊಂದಿದ್ದರು. ಸತತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಜನಪ್ರಿಯ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ಈ ಸಮೀಕ್ಷೆ ಕೈಗೊಂಡಿದ್ದು, 76 ಪ್ರತಿಶತದಷ್ಟು ಅನುಮೋದನೆಯ ರೇಟಿಂಗ್‌ನೊಂದಿಗೆ ಎಲ್ಲಾ ಜಾಗತಿಕ ನಾಯಕರ ನಡುವೆ ಪಿಎಂ ಮೋದಿ ಅಗ್ರಸ್ಥಾನಿಯಾಗಿದ್ದಾರೆ. ಜನಪ್ರಿಯತೆಯ ವಿಷಯದಲ್ಲಿ ಯಾವುದೇ ವಿಶ್ವ ನಾಯಕ ಪ್ರಧಾನಿ ಮೋದಿಯ ಹತ್ತಿರವೂ ಇಲ್ಲ. ರೇಟಿಂಗ್ ಪ್ರಕಾರ, ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು 61 ಶೇಕಡಾ ಅನುಮೋದನೆ ರೇಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯ ಟ್ವೀಟ್
ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಅಲ್ಬನೀಸ್ ಮೂರನೇ ಸ್ಥಾನದಲ್ಲಿದ್ದು ಶೇ.55ರಷ್ಟು ಅನುಮೋದನೆ ರೇಟಿಂಗ್ ಹೊಂದಿದ್ದಾರೆ. ನಂತರದ ಸ್ಥಾನದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ(ಶೇ.49), ಬ್ರೆಜಿಲಿಯನ್ ಅಧ್ಯಕ್ಷ ಲುಲಾ ಡಿಸಿಲ್ವಾ ಅವರು ಶೇ.49 ಅನುಮೋದನೆ ಪಡೆದುಕೊಂಡಿದ್ದರೂ ಐದನೇ ಸ್ಥಾನದಲ್ಲಿದ್ದಾರೆ. ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಶೇ.41ರಷ್ಟು ಅನುಮೋದನೆ ರೇಟಿಂಗ್‌ನೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಶೇ.39 ಅನುಮೋದನೆ ರೇಟಿಂಗ್‌ನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಸ್ಪೇನ್‌ನ ಪ್ರಧಾನ ಮಂತ್ರಿ ಪೆಡ್ರೊ ಸ್ಯಾಂಚೆಜ್ ಶೇ.38 ಅನುಮೋದನೆಯೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. 9ನೇ ಸ್ಥಾನದಲ್ಲಿರುವ ಜರ್ಮನಿಯ ಚಾನ್ಲರ್ ಓಲಾಫ್ ಸ್ಕೂಲ್ಜ್ ಅವರು ಶೇ.35 ಅನುಮೋದನೆ ರೇಟಿಂಗ್ ಹೊಂದಿದ್ದಾರೆ. ಹಾಗೆಯೇ 10ನೇ ಸ್ಥಾನದಲ್ಲಿರುವ ಬ್ರಿಟನ್ ಪಿಎಂ ರಿಷಿ ಸುನಕ್ ಅವರು ಶೇ.34 ರೇಟಿಂಗ್ ಪಡೆದುಕೊಂಡಿದ್ದಾರೆ.
PM Narendra Modi: ಚೀನಾ ಜಾಲತಾಣಗಳಲ್ಲೂ ಮೋದಿ ಜನಪ್ರಿಯ
ಕೊರೊನಾ ಬಿಕ್ಕಟ್ಟೇ ಎದುರಾಗಲಿ, ಹಣದುಬ್ಬರದ ಏರಿಕೆ ಕುರಿತು ಟೀಕೆಗಳೇ ವ್ಯಕ್ತವಾಗಲಿ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಜಾಗತಿಕ ವರದಿಗಳು, ಸಮೀಕ್ಷೆಗಳ ಪ್ರಕಾರವೇ ಮೋದಿ ಅವರು ವಿಶ್ವದ ಪ್ರಮುಖ ನಾಯಕರನ್ನು ಹಿಂದಿಕ್ಕಿ, ಜನಪ್ರಿಯತೆಯಲ್ಲಿ ನಂಬರ್ ಒನ್ ಆಗಿದ್ದಾರೆ. ಮೋದಿ ಜನಪ್ರಿಯತೆ ಭಾರತದ ಜಾಲತಾಣಗಳಲ್ಲಿ ಮಾತ್ರವಲ್ಲ, ಚೀನಾದ ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.
ಅದರಲ್ಲೂ, ಭಾರತ ಹಾಗೂ ಚೀನಾದ ಮಧ್ಯೆ ಕಳೆದ ಮೂರ್ನಾಲ್ಕು ವರ್ಷದಿಂದ ಗಡಿ ಬಿಕ್ಕಟ್ಟು ಉಲ್ಬಣವಾಗಿದೆ. ಭಾರತದಲ್ಲಿ ಚೀನಾವನ್ನು ಪಾಕಿಸ್ತಾನದಷ್ಟೇ ವೈರಿ ಎಂದು ಪರಿಗಣಿಸಲಾಗುತ್ತದೆ. ಭಾರತದ ಯೋಧರು ಚೀನಾ ಸೈನಿಕರನ್ನು ಗಡಿಯಲ್ಲಿ ಹಿಮ್ಮೆಟ್ಟಿಸಿದ ವಿಡಿಯೊಗಳು ಲಭ್ಯವಾಗಿದೆ. ಹೀಗಿದ್ದರೂ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಜನಪ್ರಿಯತೆ ಹೆಚ್ಚಿದೆ. ಅದರಲ್ಲೂ, “ಭಾರತದ ಪ್ರಧಾನಿಯನ್ನು ಚೀನಿಯರು “ಮೋದಿ ಲಾವೋಕ್ಸಿಯನ್” ಅಂದರೆ “ಮೋದಿ ಅಮರ” (Modi The Immortal) ಎಂಬ ಅಡ್ಡಹೆಸರಿನಿಂದಲೇ ಕರೆಯುತ್ತಾರೆ” ಎಂದು ಅಮೆರಿಕ ಮೂಲದ ದಿ ಡಿಪ್ಲೋಮ್ಯಾಟ್ ಮ್ಯಾಗಜಿನ್ ವರದಿ ಮಾಡಿದೆ.
ಇದನ್ನೂ ಓದಿ: ‘ಲೋಕವನ್ನೇ ಗೆದ್ದವನೆ’; ಮೋದಿ ಭಾವಚಿತ್ರಕ್ಕೆ ಮುತ್ತು ಕೊಟ್ಟ ಕರ್ನಾಟಕದ ರೈತ, ವಿಡಿಯೊ ವೈರಲ್
ಚೀನಾದ ಸೋಷಿಯಲ್ ಮೀಡಿಯಾಗಳ ವಿಶ್ಲೇಷಕರೂ ಆದ ಪತ್ರಕರ್ತ ಮು ಚುನ್‌ಶಾನ್ ಅವರು ಸಿನಾ ವೆಬೊದಲ್ಲಿ (Sina Weibo) (ಚೀನಾದಲ್ಲಿ ಇದು ಟ್ವಿಟರ್‌ಗೆ ಪರ್ಯಾಯವಾಗಿ ಬಳಸುವ ಜಾಲತಾಣ), “ಭಾರತದ ದೃಷ್ಟಿಯಲ್ಲಿ ಚೀನಾ ಹೇಗಿದೆ?” ಎಂಬ ಲೇಖನವನ್ನು ಬರೆದಿದ್ದಾರೆ. ಇದರಲ್ಲಿ ಅವರು, “ಚೀನಿಯರು ಮೋದಿ ಅವರನ್ನು ಜನಪ್ರಿಯ ನಾಯಕ ಎಂಬುದಾಗಿ ಪರಿಗಣಿಸುತ್ತಾರೆ. ಅವರು ಜಗತ್ತಿನ ಹಲವು ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ದೇಶಗಳ ಮಧ್ಯೆ ಸಮತೋಲನ ಕಾಪಾಡುತ್ತಾರೆ ಎಂಬುದಾಗಿ ನಂಬಿದ್ದಾರೆ” ಎಂದು ಹೇಳಿದ್ದಾರೆ.