ತೆಲಂಗಾಣ: ರಾಜ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪ್ರಾರಂಭವಾಗಿದ್ದು, ಇಂದು ಮಧ್ಯಾಹ್ನ ೩.೪೦ರ ಹೊತ್ತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೈದರಾಬಾದ್‌ನ ಬೇಗಮ್‌ಪೇಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರನ್ನು ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ತೆಲಂಗಾಣದ ಪಶುಸಂಗೋಪನಾ ಸಚಿವ ಟಿ.ಶ್ರೀನಿವಾಸ್ ಯಾದವ್ ಮತ್ತು ಬಿಜೆಪಿ ಪ್ರಮುಖರು ಬರಮಾಡಿಕೊಂಡರು. ಹೈದರಾಬಾದ್ ತಲುಪುತ್ತಿದ್ದಂತೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಡೈನಾಮಿಕ್ ನಗರ ಹೈದರಾಬಾದ್‌ಗೆ ಆಗಮಿಸಿದ್ದೇನೆ. ಬಿಜೆಪಿಯನ್ನು ಮತ್ತಷ್ಟು ಬಲಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತು ಇನ್ನೂ ಅನೇಕ ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ಮಾಡಲಿದ್ದೇವೆʼ ಎಂದು ಬರೆದುಕೊಂಡಿದ್ದಾರೆ. ಮೋದಿ ಏರ್‌ಪೋರ್ಟ್‌ನಿಂದ ನೇರವಾಗಿ ಕಾರ್ಯಕಾರಿಣಿ ನಡೆಯಲಿರುವ ಹೈದರಾಬಾದ್‌ನ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ಗೆ ತಲುಪಿದ್ದು, ಅಲ್ಲಿ ಅವರನ್ನು ಜೆ.ಪಿ.ನಡ್ಡಾ ಮತ್ತಿತರ ಗಣ್ಯರು ಸ್ವಾಗತಿಸಿದರು.
ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೂ ಮೊದಲು ಗೃಹ ಸಚಿವ ಅಮಿತ್ ಶಾ ಹೈದರಾಬಾದ್‌ಗೆ ಆಗಮಿಸಿದ್ದು, ಅವರನ್ನು ಏರ್‌ಪೋರ್ಟ್‌ನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಸ್ವಾಗತಿಸಿದರು. ಇವರೂ ಸಹ ಕಾರ್ಯಕಾರಿಣಿ ನಡೆಯಲಿರುವ ಕನ್ವೆನ್ಷನ್ ಸೆಂಟರ್ ತಲುಪಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈಗಾಗಲೇ ಹೈದರಾಬಾದ್‌ಗೆ ಆಗಮಿಸಿದ್ದಾರೆ. ದೇಶದ ಎಲ್ಲೆಡೆಯಿಂದ ಬಿಜೆಪಿಯ ಗಣ್ಯರು ಆಗಮಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದೀಪ ಬೆಳಗುವ ಮೂಲಕ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿದ್ದಾರೆ. ಕಾರ್ಯಕಾರಿಣಿ ನಡೆಯುತ್ತಿರುವ ಕನ್ವೆನ್ಷನ್ ಸೆಂಟರ್ ಹೊರಗಡೆ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯುತ್ತಿದೆ.
ಕಾರ್ಯಕಾರಿಣಿಯಲ್ಲಿ ಬಿಜೆಪಿ ನಾಯಕರು ರಾಜಕೀಯ ಮತ್ತು ಆರ್ಥಿಕತೆ ವಿಚಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲೂ ಮುಖ್ಯವಾಗಿ ಮುಂಬರುವ ರಾಷ್ಟ್ರಪತಿ ಚುನಾವಣೆ, ಇದೀಗ ಮಹಾರಾಷ್ಟ್ರದಲ್ಲಿ ರಚಿತವಾದ ಬಿಜೆಪಿ ಮತ್ತು ಶಿವಸೇನೆ ಬಂಡಾಯ ನಾಯಕರ ಮೈತ್ರಿ ಸರ್ಕಾರದ ಕುರಿತು ಮಹತ್ವದ ವಿಷಯಗಳ ಮಾತುಕತೆ ನಡೆಯಲಿದೆ. ಹಾಗೇ, ಭಾರತದ ಆರ್ಥಿಕತೆ ಅಭಿವೃದ್ಧಿಗಾಗಿ ಕಾರ್ಯಸೂಚಿ ರಚನೆಗೆ ಪೂರಕವಾದ ವಿಚಾರಗಳ ಚರ್ಚೆಯೂ ಆದ್ಯತೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಎರಡು ದಿನಗಳ ಕಾರ್ಯಕಾರಿಣಿ ಸಾಂಸ್ಕೃತಿಕ ಉತ್ಸವದಂತೆ ನಡೆಯಲಿದೆ.
ಇದನ್ನೂ ಓದಿ: ವಿಸ್ತಾರ Explainer: ಬಿಜೆಪಿ ಕಾರ್ಯಕಾರಿಣಿ, ಟಿಆರ್‌ಎಸ್ ಜತೆ ಫೈನಲ್ ಫೈಟ್‌ಗೆ ಮುಹೂರ್ತ?