ಅಯೋಧ್ಯೆ: ಅಯೋಧ್ಯೆಯಲ್ಲಿ ಪುನರಾಭಿವೃದ್ಧಿಗೊಂಡಿರುವ ರೈಲು ನಿಲ್ದಾಣ (ayodhya railaway station) ಮತ್ತು ಹೊಸ ವಿಮಾನ ನಿಲ್ದಾಣವನ್ನು (ayodhya Airport) ಉದ್ಘಾಟಿಸಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಸ್ವಾಗತಿಸಲು ಅಯೋಧ್ಯೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ದೇಶಾದ್ಯಂತದಿಂದ ಬಂದ ಕಲಾವಿದರ ವಿವಿಧ ಗುಂಪುಗಳು ಶನಿವಾರ ಅವರನ್ನು ಸ್ವಾಗತಿಸಲಿವೆ.
ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ರಾಮ್ ಪಥ್ ವರೆಗಿನ ಮಾರ್ಗದಲ್ಲಿ ನಿರ್ಮಿಸಲಾದ ಒಟ್ಟು 40 ವೇದಿಕೆಗಳಲ್ಲಿ 1,400ಕ್ಕೂ ಹೆಚ್ಚು ಕಲಾವಿದರು ಜಾನಪದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ನಂತರ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಲಿದ್ದು, 15,700 ಕೋಟಿ ರೂ.ಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಜನವರಿ 22ರಂದು ರಾಮಮಂದಿರದಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಮಹಾಮಸ್ತಕಾಭಿಷೇಕ ನಡೆಯಲಿದೆ.
“ಪ್ರಧಾನಿ ಮೋದಿ ಅವರು ಬೆಳಿಗ್ಗೆ 10.45ರ ಸುಮಾರಿಗೆ ಅಯೋಧ್ಯೆ ವಿಮಾನ ನಿಲ್ದಾಣವನ್ನು ತಲುಪುವ ನಿರೀಕ್ಷೆಯಿದೆ. ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಅವರು ನೇರವಾಗಿ ಅಯೋಧ್ಯೆ ರೈಲು ನಿಲ್ದಾಣಕ್ಕೆ ತೆರಳುತ್ತಾರೆ, ಅಲ್ಲಿ ಅವರು ಪುನರಾಭಿವೃದ್ಧಿ ಮಾಡಿದ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ನಂತರ ಅವರು ವಿಮಾನ ನಿಲ್ದಾಣಕ್ಕೆ ಹಿಂತಿರುಗಿ, ಹೊಸದಾಗಿ ನಿರ್ಮಿಸಲಾದ ನಿಲ್ದಾಣವನ್ನು ಉದ್ಘಾಟನೆ ಮಾಡುತ್ತಾರೆ. ನಂತರ ʼಜನಸಭೆ’ (ಸಾರ್ವಜನಿಕ ರ್ಯಾಲಿ) ಅನ್ನು ಉದ್ದೇಶಿಸಿ ಮಾತನಾಡುತ್ತಾರೆ” ಎಂದು ಅಯೋಧ್ಯೆಯ ವಿಭಾಗೀಯ ಆಯುಕ್ತ ಗೌರವ್ ದಯಾಳ್ ತಿಳಿಸಿದರು.
ಸುಮಾರು ಒಂದು ಗಂಟೆ ನಡೆಯುವ ರ್ಯಾಲಿಗೆ ಸುಮಾರು 1.5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ನಂತರ ಪ್ರಧಾನಿ ಅಯೋಧ್ಯೆಯಿಂದ ನಿರ್ಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದ ನಡುವೆ ರೋಡ್‌ಶೋ ನಡೆಸಲಿದ್ದಾರೆ ಮತ್ತು ಅಯೋಧ್ಯೆಯ ಜನರ ಶುಭಾಶಯಗಳನ್ನು ಸ್ವೀಕರಿಸಲಿದ್ದಾರೆ. ಜಿಲ್ಲಾಡಳಿತ ಇತ್ತೀಚೆಗೆ ಪುನರಾಭಿವೃದ್ಧಿ ಮಾಡಿದ ರಾಮ್ ಪಥ್ ಮತ್ತು ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿರುವ ರಸ್ತೆಗಳ ಎರಡೂ ಬದಿಗಳಲ್ಲಿ ತಾತ್ಕಾಲಿಕ ಮರದ ಬ್ಯಾರಿಕೇಡ್‌ಗಳನ್ನು ಹಾಕಿದೆ.
ದೇವಾಲಯದ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪ್ರಧಾನಿ ಮೋದಿಯವರ ಚಿತ್ರವನ್ನು ಹೊಂದಿರುವ ಮತ್ತು ʼಪವಿತ್ರ ನಗರವಾದ ಅಯೋಧ್ಯೆಗೆ ಸ್ವಾಗತʼದ ಸಂದೇಶವನ್ನು ಹೊಂದಿರುವ ದೊಡ್ಡ ಪೋಸ್ಟರ್‌ಗಳನ್ನು ಹಾಕಲಾಗಿದೆ.
ಶುಕ್ರವಾರ ಅಯೋಧ್ಯೆಗೆ ಆಗಮಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಭೇಟಿಗಾಗಿ ಪಟ್ಟಣದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಮುಖ್ಯಮಂತ್ರಿಗಳು ಅಯೋಧ್ಯೆಯಲ್ಲಿ ಪರಿಶೀಲನಾ ಸಭೆಯನ್ನೂ ನಡೆಸಲಿದ್ದಾರೆ ಎಂದು ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲದೆ, ರೈಲ್ವೆ ಸಚಿವ ಅಶ್ವನಿ ವೈಷ್ಣವ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಸ್ಥಳೀಯ ಸಂಸದರು ಮತ್ತು ಶಾಸಕರು ಮತ್ತು ಪಕ್ಷದ ಕೆಲವು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Ayodhya Airport: ಇಂದು ಅಯೋಧ್ಯೆ ಏರ್‌ಪೋರ್ಟ್, ರೈಲು ನಿಲ್ದಾಣ ಉದ್ಘಾಟಿಸಲಿದ್ದಾರೆ ಮೋದಿ