ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯ ನಾಲ್ಕನೇ ಹಂತದ ಮತದಾನ ಈಗಾಗಲೇ ಪೂರ್ಣಗೊಂಡಿದೆ. ಇನ್ನು ಮೂರು ಹಂತಗಳ ಮತದಾನ ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ(PM Narendra Modi) ಮೂರನೇ ಬಾರಿಗೆ ಗದ್ದುಗೆ ಏರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದಷ್ಟೇ ಅಲ್ಲದೇ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ನೂರು ದಿನಗಳ ಯೋಜನೆ ನೀಲನಕ್ಷೆಯನ್ನು ಬಹಿರಂಗಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮೊದಲ 100 ದಿನಗಳ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದು, ಈ ಬಾರಿ ಯುವಕರನ್ನೇ ಗುರಿಯನ್ನಾಗಿಸಿ ಯೋಜನೆ ರೂಪಿಸಾಗುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಕಳೆದೆರಡು ಬಾರಿಯಂತೆ ಈ ಬಾರಿ ಮೊದಲ 100 ದಿನಗಳ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಯುವಕರನ್ನು ಗುರಿಯಾಗಿಸಿಯೇ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಇದನ್ನು ಹೆಚ್ಚುವರಿ 25 ದಿನಗಳವರೆಗೆ ವಿಸ್ತರಿಸಲಾಗುತ್ತದೆ. ಈ 125 ದಿನಗಳವರೆಗೆ ಮೊದಲ ಬಾರಿಗೆ ಮತದಾನ ಮಾಡಿದವರು, ಯುವಜನತೆಯನ್ನು ಗುರಿಯಾಗಿಸಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕನಸಿನ ಯೋಜನೆಯಾಗಿರುವ ವಿಕ್ಷಿತ್ ಭಾರತ್‌ಗೆ ಯುವಕರು ತಮ್ಮ ಹೊಸ ಐಡಿಯಾಗಳ ಮೂಲಕ ಕೊಡುಗೆ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ನಾನು 100ದಿನಗಳ ಯೋಜನೆ ರೂಪಿಸಿ ಆಗಿದೆ. ಇದೀಗ ನಾನು ಯುವಕರಿಗಾಗಿ ಹೆಚ್ಚುವರಿಯಾಗಿ 25ಗಳವರೆಗೆ ಈ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಿದ್ದೇನೆ. ಒಟ್ಟು 125 ದಿನಗಳಲ್ಲಿ 25 ದಿನಗಳನ್ನು ಯುವಕರಿಗಾಗಿ ಮೀಸಲಿಟ್ಟಿದ್ದೇನೆ. ಈ ಯೋಜನೆಯಲ್ಲಿ ಯುವಕರು ಸಕ್ರಿಯವಾಗಿ ಭಾಗಿಯಾಗಿ ತಮ್ಮ ಅಭಿಪ್ರಾಯ, ಚಿಂತನೆಯನ್ನು ಹಂಚಿಕೊಳ್ಳಬಹುದಾಗಿದೆ. ಈ ಬಗ್ಗೆ 20 ಲಕ್ಷಕ್ಕೂ ಅಧಿಕ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನೂ ಓದಿ: DK Shivakumar: ಉತ್ತರ ಪ್ರದೇಶದಲ್ಲಿ ಡಿಕೆಶಿ; ಅಮೇಥಿ, ರಾಯ್ ಬರೇಲಿಯಲ್ಲಿ ಮಾಡ್ತಾರಾ ಕಮಾಲ್?
ಪ್ರಧಾನಿ ಮೋದಿ ಇದೇ ವಿಚಾರವನ್ನು ಮುಂಬೈನಲ್ಲಿ ನಡೆದ ರ್ಯಾಲಿ ವೇಳೆಯೂ ಪ್ರಸ್ತಾಪಿಸಿದ್ದರು. ಮೊದಲ 100ದಿನಗಳ ಯೋಜನೆ ಬ್ಲೂ ಪ್ರಿಂಟ್ ತಯಾರಾಗಿದೆ. ಜೂ.4ರಿಂದ ಜಾರಿಗೊಳಿಸೋದೆ ನಮ್ಮ ಗುರಿ. ಎಲ್ಲರೂ ಕೇಳುತ್ತಿದ್ದಾರೆ ಇದೇನು ನಿಮ್ಮ ಅತಿಯಾದ ಆತ್ಮವಿಶ್ವಾಸವೇ ಎಂದು. ನಾನು ಹೇಳುವುದು ಇಷ್ಟೇ ಇದು ಓವರ್ ಕಾನ್ಫಿಡೆನ್ಸ್ ಅಲ್ಲ ಬದಲಾಗಿ ಇದು ಜನರ ಆಶೀರ್ವಾದ ನಮ್ಮ ಮೇಲಿರುವ ನಂಬಿಕೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಈಗಾಗಲೇ ದೇಶದಲ್ಲಿ 4 ಹಂತಗಳ ಮತದಾನ ಪೂರ್ಣಗೊಂಡಿದೆ. ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ”ನಾನು ಅಪ್ರಮಾಣಿಕವಾಗಿ ನಡೆದುಕೊಂಡಿದ್ದರೆ ಗಲ್ಲು ಶಿಕ್ಷೆ ಎದುರಿಸಲೂ ಸಿದ್ಧʼʼ ಎಂದು ಭಾವುಕರಾಗಿ ಹೇಳಿದ್ದಾರೆ.
ತಮ್ಮ ಸರ್ಕಾರವು ಕೆಲವು ಆಯ್ದ ಕೈಗಾರಿಕೋದ್ಯಮಿಗಳ ಪರವಾಗಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು, ʼʼದೇಶದ ಸಂಪತ್ತಿನ ಸೃಷ್ಟಿಕರ್ತರ ಪರವಾಗಿ ನಾನು ದೃಢವಾಗಿ ನಿಲ್ಲುತ್ತೇನೆ ಮತ್ತು ಯಾರಿಗಾದರೂ ಅಪ್ರಾಮಾಣಿಕ ರೀತಿಯಲ್ಲಿ ಲಾಭ ಮಾಡಿಕೊಟ್ಟರೆ ಶಿಕ್ಷೆಯನ್ನು ಎದುರಿಸಲು ಸಿದ್ಧʼʼ ಎಂದು ತಿಳಿಸಿದ್ದಾರೆ.