Site icon Vistara News

PM Narendra Modi: ಯುಎಇ ಅಧ್ಯಕ್ಷರನ್ನು “ಸಹೋದರ’ ಎಂದು ಕರೆದ ಪ್ರಧಾನಿ ಮೋದಿ

PM Narendra Modi called the UAE president a brother

ನವದೆಹಲಿ: ಪ್ರಸ್ತುತ ಯುಎಇ (UAE visit) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಂಗಳವಾರ ತಮ್ಮ ಸಹವರ್ತಿ ಅಧ್ಯಕ್ಷ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (UAE President Sheikh Mohammed Bin Zayed Al Nahyan) ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು ಮತ್ತು ಹಲವಾರು ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು. ಯುಎಇ ಅಧ್ಯಕ್ಷರ ಜತೆಗಿನ ಬಾಂಧವ್ಯವನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ ಅವರು, ಅವರನ್ನು ತಮ್ಮ ಸಹೋದರ ಎಂದು ಕರೆದರು. ಅಲ್ಲದೇ, ಕಳೆದ ಏಳು ತಿಂಗಳಲ್ಲಿ ನಾವಿಬ್ಬರೂ ಐದು ಬಾರಿ ಭೇಟಿಯಾಗಿ ಮಾತುಕತೆ ನಡಸಿದ್ದೇವೆ ಎಂದು ಹೇಳಿಕೊಂಡರು.

ಸಹೋದರ, ಮೊದಲನೆಯದಾಗಿ, ನಿಮ್ಮ ಆತ್ಮೀಯ ಸ್ವಾಗತಕ್ಕಾಗಿ ನಾನು ನಿಮಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ಕಳೆದ ಏಳು ತಿಂಗಳಲ್ಲಿ ನಾವು ಐದು ಬಾರಿ ಭೇಟಿಯಾಗಿದ್ದೇವೆ, ಇದು ತುಂಬಾ ಅಪರೂಪ. ನನಗೆ ಏಳು ಬಾರಿ ಇಲ್ಲಿಗೆ ಬರುವ ಅವಕಾಶವೂ ಸಿಕ್ಕಿದೆ … ನಾವು ಪ್ರತಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ರೀತಿಯಲ್ಲಿ, ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಮತ್ತು ಯುಎಇ ನಡುವೆ ಜಂಟಿ ಸಹಭಾಗಿತ್ವವಿದೆ ಎಂದು ಯುಎಇ ಅಧ್ಯಕ್ಷರೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ ದೇಶದ ಮೊದಲ ಹಿಂದೂ ದೇವಾಲಯ ನಿರ್ಮಾಣಕ್ಕೆ ನಿರ್ವಹಿಸಿದ ಪ್ರಮುಖ ಪಾತ್ರಕ್ಕಾಗಿ ಯುಎಇ ನಾಯಕರಿಗೆ ಧನ್ಯವಾದ ತಿಳಿಸಿದರು. ನಿಮ್ಮ ಬೆಂಬಲ ಇಲ್ಲದೇ ಬಿಎಪಿಎಸ್ ದೇವಾಲಯ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದರು. ಫೆ. 14, ಬುಧವಾರ ಈ ದೇವಾಲಯವನ್ನು ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.

ಯುಎಇನಲ್ಲಿ ಯುಪಿಐ ರುಪೇ ಕಾರ್ಡ್ ಸೇವೆಗಳಿಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ (UAE President Sheikh Mohammed Bin Zayed Al Nahyan) ಅವರು ಅಬುಧಾಬಿಯಲ್ಲಿ ಯುಪಿಐ ರೂಪೇ ಕಾರ್ಡ್ (UPI RuPay Card) ಸೇವೆಗಳಿಗೆ ಮಂಗಳವಾರ ಚಾಲನೆ ನೀಡಿದರು. ಇದು ಉಭಯ ದೇಶಗಳ ನಡುವಿನ ಗಡಿಯಾಚೆಗಿನ ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ಕಳೆದ ವರ್ಷ ಜುಲೈನಲ್ಲಿ ಪ್ರಧಾನಮಂತ್ರಿಯವರ ಅಬುಧಾಬಿ ಭೇಟಿಯ ಸಂದರ್ಭದಲ್ಲಿ ಸಹಿ ಮಾಡಿದ ಇಂಟರ್ಲಿಂಕಿಂಗ್ ಪಾವತಿ ಮತ್ತು ಸಂದೇಶ ವ್ಯವಸ್ಥೆಗಳ ಕುರಿತಾದ ತಿಳುವಳಿಕಾ ಒಪ್ಪಂದವನ್ನು ಅನ್ವಯ ಈಗ ಸೇವೆಗೆ ಚಾಲನೆ ನೀಡಲಾಗಿದೆ.

ಸೋಮವಾರವಷ್ಟೇ ಭಾರತ ಸರ್ಕಾರವು ಮಾರಿಷಸ್ ಮತ್ತು ಶ್ರೀಲಂಕಾದಲ್ಲಿ ಯುಪಿಐ ಪಾವತಿ ಸೇವೆಗೆ ಚಾಲನೆ ನೀಡಿತ್ತು.

ಪ್ರಧಾನಿ ಮೋದಿ ಎರಡು ದಿನಗಳ ಪ್ರವಾಸಕ್ಕಾಗಿ ಯುಎಇಗೆ ತೆರಳಿದ್ದಾರೆ. ಅವರನ್ನು ಅಧ್ಯಕ್ಷ ನಹ್ಯಾನ್ ಸ್ವಾಗತಿಸಿದರು. ದೇಶಕ್ಕೆ ಆಗಮಿಸಿದ ಪ್ರಧಾನಿಯವರಿಗೆ ಗೌರವ ರಕ್ಷೆ ನೀಡಲಾಯಿತು. ನಂತರ ರಾಷ್ಟ್ರಪತಿ ಭವನವಾದ ಕಸರ್ ಅಲ್ ವತನ್‌ನಲ್ಲಿ ಅವರಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು. ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯಲು ನಾಯಕರು ನಂತರ ಸಭೆಗಳನ್ನು ನಡೆಸುತ್ತಿದ್ದಾರೆ. 2015ರ ಬಳಿಕ ಯುಎಇಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವುದು ಇದೇ ಏಳನೆ ಬಾರಿಯಾಗಿದೆ.

ಈ ಸುದ್ದಿಯನ್ನೂ ಓದಿ: UPI service: ಶ್ರೀಲಂಕಾ, ಮಾರಿಷಸ್‌ನಲ್ಲಿ ಭಾರತೀಯ ಯುಪಿಐ ಸೇವೆ ಆರಂಭ

Exit mobile version