Site icon Vistara News

Gujarat Summit: ಯುಎಇ ಅಧ್ಯಕ್ಷನನ್ನು ‘ಬ್ರದರ್‌’ ಎಂದು ಕರೆದ ಮೋದಿ; ಕಾರಣ ಹೀಗಿದೆ

Modi UAE President

PM Narendra Modi Calls Mohammed bin Zayed Al Nahyan As Brother In Gujarat Summit

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಯುಎಇ ಅಧ್ಯಕ್ಷ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ (Mohammed bin Zayed Al Nahyan) ಅವರ ಮಧ್ಯೆ ಉತ್ತಮ ಬಾಂಧವ್ಯವಿದೆ. ಇದೇ ಕಾರಣಕ್ಕೆ ಯುಎಇ ಅಧ್ಯಕ್ಷರನ್ನು ಮೋದಿ ಅವರು ಮಂಗಳವಾರ (ಜನವರಿ 9) ಗುಜರಾತ್‌ಗೆ (Gujarat Summit) ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲದೆ, ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ ಅವರೊಂದಿಗೆ ರೋಡ್‌ ಶೋ ಕೂಡ ನಡೆಸಿದರು. ಈಗ ಮೋದಿ ಅವರು ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ ಅವರನ್ನು ಬ್ರದರ್‌ (Brother) ಎಂದು ಕರೆದಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿ ಬುಧವಾರದಿಂದ (ಜನವರಿ 10) ಆರಂಭವಾದ ವೈಬ್ರಂಟ್‌ ಗುಜರಾತ್‌ ಗ್ಲೋಬಲ್‌ ಸಮಿಟ್‌ಗೆ (Vibrant Gujarat Global Summit 2024) ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಇದೇ ವೇಳೆ ಮೋದಿ ಅವರು “ಭಾರತ ಹಾಗೂ ಯುಎಇ ಮಧ್ಯೆ ಉತ್ತಮ ಬಾಂಧವ್ಯ ಇದೆ. ಭಾರತದ ಬಂದರು, ಆಹಾರ ಸಂಸ್ಕರಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ ಇದೆ. ಎರಡೂ ದೇಶಗಳ ಮಧ್ಯೆ ಉತ್ತಮ ವ್ಯಾಪಾರ ಒಪ್ಪಂದಗಳಾಗಿವೆ. ಇದಕ್ಕೆ ಸಹೋದರ ಶೇಖ್‌ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ ಅವರ ಯೋಗದಾನ ಹೆಚ್ಚಿದೆ. ಅವರಿಗೆ ನನ್ನ ಅಭಿನಂದನೆಗಳು” ಎಂದು ಹೇಳಿದರು.

3ನೇ ಆರ್ಥಿಕತೆ ದೇಶ; ಇದು ನನ್ನ ಗ್ಯಾರಂಟಿ

“ಭಾರತವು ಆರ್ಥಿಕವಾಗಿ ಬಲಾಢ್ಯವಾಗುತ್ತಿದೆ. ನಮ್ಮ ದೇಶವು ಕಳೆದ 10 ವರ್ಷಗಳ ಹಿಂದೆ ಜಗತ್ತಿನಲ್ಲಿ 11ನೇ ಬೃಹತ್‌ ಆರ್ಥಿಕ ರಾಷ್ಟ್ರವಾಗಿತ್ತು. ಆದರೆ, ದೇಶವೀಗ ಐದನೇ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ, ಭಾರತವು ಕೆಲವೇ ವರ್ಷಗಳಲ್ಲಿ ಮೂರನೇ ಬೃಹತ್‌ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ. ಯಾರು ಏನು ಬೇಕಾದರೂ ವಿಶ್ಲೇಷಣೆ ಮಾಡಲಿ, ಇದು ಮೋದಿ ನೀಡುತ್ತಿರುವ ಗ್ಯಾರಂಟಿಯಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Gujarat Summit: 2 ಲಕ್ಷ ಕೋಟಿ ರೂ. ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ; ಅದಾನಿ ಘೋಷಣೆ

“ಭಾರತವು ಮೂಲ ಸೌಕರ್ಯದಿಂದ ಹಿಡಿದು ತಂತ್ರಜ್ಞಾನದವರೆಗೆ ಸಕಲ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಡಿಜಿಟಲ್‌ ಇಂಡಿಯಾಗೆ ಆದ್ಯತೆ ನೀಡಲಾಗಿದೆ. ಕಳೆದ 10 ವರ್ಷದಲ್ಲಿ ಮೊಬೈಲ್‌ ಉತ್ಪಾದನೆ, ತಂತ್ರಜ್ಞಾನದ ಏಳಿಗೆ ಹೊಂದಿವೆ. ನವೋದ್ಯಮಗಳಿಗೆ ಎಕೊ ಸಿಸ್ಟಮ್‌ ರೂಪಿಸಿದ್ದೇವೆ. ದೇಶದ ರಫ್ತು ಪ್ರಮಾಣವೂ ದಾಖಲೆಯಾಗಿದೆ. ದೇಶದ ಜನರ ಜೀವನವೂ ಸುಗಮಗೊಳಿಸಿದ್ದೇವೆ. ಹಳ್ಳಿಗಳಿಗೆ ಆಪ್ಟಿಕಲ್‌ ಫೈಬರ್‌ ತಲುಪಿದೆ. ಜನ ಬಡತನದಿಂದ ಹೊರಬಂದಿದ್ದಾರೆ. ಹಾಗಾಗಿ, ಎಲ್ಲ ದೇಶಗಳೂ ಭಾರತದ ಏಳಿಗೆಯಲ್ಲಿ ಸಹಭಾಗಿತ್ವ ಹೊಂದಿ ಎಂದು ಮನವಿ ಮಾಡುತ್ತಿದ್ದೇನೆ. ನಿಮ್ಮೆಲ್ಲರಿಗೂ ಭಾರತ ಕೈ ಬೀಸಿ ಕರೆಯುತ್ತಿದೆ” ಎಂದು ಮೋದಿ ಹೇಳಿದರು.

ಹೂಡಿಕೆದಾರರ ಸಮಾವೇಶದಲ್ಲಿ ಗೌತಮ್‌ ಅದಾನಿ ಕೂಡ ಮಾತನಾಡಿದರು. “ಗುಜರಾತ್‌ನಲ್ಲಿ ಮುಂದಿನ ಐದು ವರ್ಷಗಳಲ್ಲಿ ಅದಾನಿ ಗ್ರೂಪ್‌ 2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ. ಇದರಿಂದ 1 ಲಕ್ಷ ಜನರಿಗೆ ನೇರವಾಗಿ ಉದ್ಯೋಗ ದೊರೆಯಲಿದೆ” ಎಂದು ಘೋಷಿಸಿದರು. “ಮರು ನವೀಕರಣ ಸಂಪನ್ಮೂಲದ ಬಳಕೆ, ಸೋಲಾರ್‌ ಪ್ಯಾನೆಲ್‌ಗಳ ಅಳವಡಿಕೆ ಸೇರಿ ಹಲವು ದಿಸೆಯಲ್ಲಿ ಅದಾನಿ ಗ್ರೂಪ್‌ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಬೆಂಬಲ ನೀಡುತ್ತಿದೆ” ಎಂದೂ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version