Site icon Vistara News

Bangladesh Protest: ಬಾಂಗ್ಲಾದೇಶ ಹಿಂಸಾಚಾರ ಕುರಿತು ಮೋದಿ ಮಹತ್ವದ ಸಭೆ; ಚರ್ಚಿಸಿದ ವಿಷಯಗಳೇನು?

Bangladesh Protest

ನವದೆಹಲಿ: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರವು (Bangladesh Protest) ನಾಗರಿಕ ದಂಗೆಗೆ ತಿರುಗಿ, ಪ್ರಧಾನಿ ಶೇಖ್‌ ಹಸೀನಾ (Sheikh Hasina) ಅವರೇ ರಾಜೀನಾಮೆ ನೀಡಿ ಭಾರತಕ್ಕೆ ಆಗಮಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದಕ್ಕಾಗಿಯೇ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದರ ಬೆನ್ನಲ್ಲೇ, ಬಾಂಗ್ಲಾದೇಶದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಭದ್ರತೆ ಕುರಿತ ಸಂಸದೀಯ ಸಭೆ ನಡೆಸಿದ ಮೋದಿ, ಬಾಂಗ್ಲಾದೇಶ ಹಿಂಸಾಚಾರದ ಕುರಿತು ಮಾಹಿತಿ ಪಡೆದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.‌ ಜೈಶಂಕರ್‌, ಸಂಸದೀಯ ಕಾರ್ಯದರ್ಶಿ ರಾಜೀವ್‌ ಗೌಬಾ, ರಾ ಮುಖ್ಯಸ್ಥ ರವಿ ಸಿನ್ಹಾ, ಐಬಿ ನಿರ್ದೇಶಕ ತಪನ್‌ ದೇಕಾ ಸೇರಿ ಹಲವರೊಂದಿಗೆ ಮೋದಿ ಉನ್ನತ ಮಟ್ಟದ ಸಭೆ ನಡೆಸಿದರು.

ಚರ್ಚಿಸಿದ ವಿಷಯಗಳು ಏನೇನು?

ಬಾಂಗ್ಲಾದೇಶದ ಹಿಂಸಾಚರದಿಂದ ಭಾರತದ ಮೇಲಾಗುವ ಪರಿಣಾಮಗಳು ಏನು? ಗಡಿಯಲ್ಲಿ ಭದ್ರತೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ಒಳನುಸುಳುವಿಕೆ ನಿಯಂತ್ರಣ, ಬಾಂಗ್ಲಾದೇಶದ ಜತೆಗಿನ ವ್ಯಾಪಾರ-ಒಪ್ಪಂದ, ಹಿಂಸಾಚಾರ ಇನ್ನೂ ಜಾಸ್ತಿಯಾದರೆ ಏನಾಗಬಹುದು, ಭಾರತ ತೆಗೆದುಕೊಳ್ಳಬೇಕಾದ ಕ್ರಮಗಳು ಯಾವವು ಎಂಬುದು ಸೇರಿ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.

ಭಾರತದ ಮೇಲೆ ಏನೆಲ್ಲ ಪರಿಣಾಮ ಸಾಧ್ಯತೆ?

ಬಾಂಗ್ಲಾದೇಶದಲ್ಲಿ ಹಿಂಸಾಚಾರವು ಭುಗಿಲೆದ್ದಿರುವುದರ ಪರಿಣಾಮವು ಭಾರತದ ಮೇಲೂ ಬೀರುವ ಸಾಧ್ಯತೆ ಹೆಚ್ಚಿದೆ. ಬಾಂಗ್ಲಾದಲ್ಲಿ ಶಾಂತಿ ನೆಲೆಸಿದ್ದಾಗಲೇ ನುಸುಳುಕೋರರು ಭಾರತವನ್ನು ಪ್ರವೇಶಿಸುತ್ತಿದ್ದರು. ಈಗ ಸುಮಾರು 4 ಲಕ್ಷ ಜನ ದಂಗೆಯೆದ್ದಿರುವ ಕಾರಣ ಇನ್ನಷ್ಟು ಜನ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿ, ಅವರು ದೇಶಕ್ಕೆ ತಲೆನೋವಾಗಬಹುದು. ಸೇನೆಯಲ್ಲಿ ಆಡಳಿತ ಯಂತ್ರ ಕುಸಿದುಬಿದ್ದಿದ್ದು, ಮಿಲಿಟರಿ ಆಡಳಿತ ಜಾರಿಗೆ ಬಂದಿರುವ ಕಾರಣ ಭಾರತ ಹಾಗೂ ಬಾಂಗ್ಲಾದೇಶದ ವ್ಯಾಪಾರ, ಒಪ್ಪಂದಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಮಿಲಿಟರಿ ಆಡಳಿತ ಕೊನೆಯಾಗಿ, ಹೊಸ ಸರ್ಕಾರ ರಚನೆಯಾಗಿ, ಪ್ರತಿಭಟನೆ ಶಾಂತವಾಗುವವರೆಗೂ ಭಾರತಕ್ಕೆ ಸಂಕಷ್ಟ ತಪ್ಪಿದ್ದಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಶೇಖ್‌ ಹಸೀನಾ ಭಾರತ ಪರ ನಿಲುವು ಹೊಂದಿದ್ದಾರೆ. ಹಾಗಾಗಿ ಪ್ರತಿಭಟನೆಕಾರರ ಕೋಪ ಭಾರತದ ಮೇಲೆ ತಿರುಗಬಹುದು. ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಯುವ ಅಪಾಯವೂ ಇದೆ.

ಇದನ್ನೂ ಓದಿ: Bangladesh Protests: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ; ಮೃತರ ಸಂಖ್ಯೆ 98ಕ್ಕೆ ಏರಿಕೆ: ಭಾರತೀಯರಿಗೆ ಮುನ್ನೆಚ್ಚರಿಕೆ

Exit mobile version