Site icon Vistara News

ಇಸ್ರೇಲ್‌-ಹಮಾಸ್‌ ಯುದ್ಧದಲ್ಲಿ ನಾಗರಿಕರ ಸಾವು ಖಂಡಿಸಿದ ಮೋದಿ; ಶಾಂತಿ ಮಾತುಕತೆಗೆ ಕರೆ

ಭಾರತ

UNHRC adopts resolution condemning Israel’s war crimes in Gaza; India, 12 other countries abstain

ನವದೆಹಲಿ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು (Israel Hamas War) ದಿನೇದಿನೆ ಜಾಸ್ತಿಯಾಗುತ್ತಿದೆ. ಅದರಲ್ಲೂ, ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ಮುಂದಾಗಿರುವ ಇಸ್ರೇಲ್‌ ಸೇನೆಯು ಗಾಜಾ ನಗರದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಹೀಗೆ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಸಾವಿನ ಸಂಖ್ಯೆ 12 ಸಾವಿರ ದಾಟಿದೆ. ಇದರ ಬೆನ್ನಲ್ಲೇ, ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ದಾಳಿ-ಪ್ರತಿದಾಳಿ ವೇಳೆ ನಾಗರಿಕರು ಮೃತಪಡುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಖಂಡಿಸಿದ್ದಾರೆ.

“ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಹಲವು ಸವಾಲುಗಳು, ಮನುಕುಲಕ್ಕೆ ಸಂಕಷ್ಟ ಎದುರಾಗುವ ಘಟನೆಗಳು ಸಂಭವಿಸುತ್ತಿವೆ. ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಉಗ್ರರು ದಾಳಿ ನಡೆಸಿದ್ದನ್ನು ನಾವು ಖಂಡಿಸಿದ್ದೇವೆ. ಹಾಗೆಯೇ, ಸಂಯಮ ಕಾಪಾಡಬೇಕು. ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧದಲ್ಲಿ ಜನ ಮೃತಪಟ್ಟಿರುವದಕ್ಕೆ ನಮ್ಮ ಖಂಡನೆ ಇದೆ. ಕೂಡಲೇ ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿ ನೆಲೆಸುವಂತೆ ಮಾಡಬೇಕು” ಎಂದು ವಾಯ್ಸ್‌ ಆಫ್‌ ಗ್ಲೋಬಲ್‌ ಸೌತ್‌ ಸಮಿಟ್‌ನಲ್ಲಿ ನರೇಂದ್ರ ಮೋದಿ ಹೇಳಿದ್ದಾರೆ.

12 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗಾಜಾ ಆಸ್ಪತ್ರೆಯಲ್ಲಿ ಸುರಂಗ, ಬಂದೂಕು ಪತ್ತೆಹಚ್ಚಿದ ಇಸ್ರೇಲ್; ವಿಶ್ವಸಂಸ್ಥೆ ನೆರವು ಇಲ್ಲ

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ಆರಂಭಿಸದ್ದನ್ನು ಭಾರತ ಖಂಡಿಸಿತ್ತು. ಹಾಗೆಯೇ, ಗಾಜಾ ನಗರದಲ್ಲಿ ಇಸ್ರೇಲ್‌ ಕದನವಿರಾಮ ಘೋಷಿಸಬೇಕು ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ನಿರ್ಣಯದ ಕುರಿತು ಮತದಾನ ಮಾಡಲು ಭಾರತ ನಿರಾಕರಿಸಿತ್ತು. ಹಮಾಸ್‌ ಉಗ್ರರ ಪ್ರಸ್ತಾಪ ಇರದ ಕಾರಣ ನಿರ್ಣಯಕ್ಕೆ ಮತದಾನ ಮಾಡುವುದರಿಂದ ದೂರ ಉಳಿಯಲಾಗಿದೆ ಎಂದು ಹೇಳಿತ್ತು. ಇದಾದ ಬಳಿಕ ಕದನ ವಿರಾಮ ಕುರಿತು ವಿಶ್ವಸಂಸ್ಥೆ ಮಂಡಿಸಿದ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version