Site icon Vistara News

Narendra Modi: ವೇದಿಕೆ ಮೇಲೆಯೇ ಕಣ್ಣೀರಾದ ಮಾದಿಗ ನಾಯಕನಿಗೆ ಮೋದಿ ಸಾಂತ್ವನ!

Modi Consoles Madiga Leader

PM Narendra Modi Consoles Madiga Leader As He Gets Emotional In Telangana

ಹೈದರಾಬಾದ್:‌ ನಿರರ್ಗಳ ಭಾಷಣ, ವಿರೋಧ ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಸರಾಗಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೊಂದವರಿಗೆ, ಹಿನ್ನಡೆ ಅನುಭವಿಸಿದವರಿಗೆ ಸಾಂತ್ವನ ಹೇಳುವಲ್ಲೂ ಮುಂದಿದ್ದಾರೆ. ಚಂದ್ರಯಾನ 2 ಮಿಷನ್‌ ಹಿನ್ನಡೆ ಅನುಭವಿಸಿದಾಗ ಆಗ ಇಸ್ರೋ ಅಧ್ಯಕ್ಷರಾಗಿದ್ದ ಕೆ. ಶಿವನ್‌ ಅವರನ್ನು ಮೋದಿ ಸಮಾಧಾನಪಡಿಸಿದ್ದರು. ಈಗ ತೆಲಂಗಾಣದಲ್ಲೂ ನರೇಂದ್ರ ಮೋದಿ ಅವರು ಗಳಗಳನೆ ಅತ್ತ ಮಾದಿಗ ಸಮುದಾಯದ ನಾಯಕರೊಬ್ಬರನ್ನು ಸಂತೈಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ (Viral Video) ಆಗಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಮಾದಿಗ ಸಮಾವೇಶದಲ್ಲಿ ನರೇಂದ್ರ ಮೋದಿ ಪಾಲ್ಗೊಂಡರು. ಇದೇ ವೇಳೆ ಅವರ ಪಕ್ಕದಲ್ಲಿ ಕುಳಿತಿದ್ದ ಮಾದಿಗ ಮೀಸಲಾತಿ ಹೋರಾಟ (ಪೋರಾಟ) ಸಮಿತಿ (MRPS) ಅಧ್ಯಕ್ಷ ಮಂದ ಕೃಷ್ಣ ಮಾದಿಗ ಅವರು ಭಾವುಕರಾದರು. ಇದೇ ವೇಳೆ ಅವರ ಕಣ್ಣಾಲಿಗಳು ಒದ್ದೆಯಾದವು. ಆಗ ಮೋದಿ ಅವರು ಮಂದ ಕೃಷ್ಣ ಮಾದಿಗ ಅವರ ಕೈ ಹಿಡಿದು, ಅವರಿಗೆ ಸಾಂತ್ವನದ ಮಾತುಗಳನ್ನು ಆಡಿದರು.

ವೈರಲ್‌ ಆಗಿರುವ ವಿಡಿಯೊ

ನಿಮ್ಮೆಲ್ಲರ ಕ್ಷಮೆಯಾಚಿಸುವೆ ಎಂದ ಮೋದಿ

ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ನರೇಂದ್ರ ಮೋದಿ ಅವರು ಮಾತನಾಡಿದರು. “ಇದುವರೆಗೆ ಯಾವ ಪ್ರಧಾನಿಯೂ ಮಾದಿಗ ಸಮಾವೇಶದಲ್ಲಿ ಪಾಲ್ಗೊಂಡಿರಲಿಲ್ಲ. ಸ್ವಾತಂತ್ರ್ಯ ಬಂದ ಬಳಿಕ ಪಕ್ಷಗಳು ಮಾದಿಗ ಸಮುದಾಯದವರಿಗೆ ನ್ಯಾಯ ಒದಗಿಸಲಿಲ್ಲ. ಅವರ ಏಳಿಗೆಗೆ ಕಾಂಗ್ರೆಸ್‌ ದುಡಿಯಲಿಲ್ಲ. ನಾನು ಅವೆಲ್ಲ ಪಕ್ಷಗಳ ಪರವಾಗಿ ನಿಮ್ಮ ಕ್ಷಮೆಯಾಚಿಸುತ್ತೇನೆ. ನಾನು ನಿಮ್ಮ ಬಳಿ ಏನನ್ನೂ ಬೇಡಿಕೊಂಡು ಬಂದಿಲ್ಲ. ನಿಮ್ಮ ಕ್ಷಮೆ ಕೇಳಲು ಮಾತ್ರ ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: Vocal For Local: ಮೋದಿ ‘ವೋಕಲ್‌ ಫಾರ್‌ ಲೋಕಲ್’‌ ಕರೆಗೆ ಗಣ್ಯರ ಬಲ; ಅಕ್ಷಯ್‌, ಪೆಡ್ನೇಕರ್‌ ಸಾಥ್

ಕಾಂಗ್ರೆಸ್‌, ಬಿಆರ್‌ಎಸ್‌ ವಿರುದ್ಧ ವಾಗ್ದಾಳಿ

ಸಮಾವೇಶದಲ್ಲಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. “ಬಿಆರ್‌ಎಸ್‌ ಪಕ್ಷವು ದಲಿತ ವಿರೋಧಿಯಾಗಿದೆ. ಇದರಲ್ಲಿ ಕಾಂಗ್ರೆಸ್‌ ಪಕ್ಷವೂ ಕಡಿಮೆ ಇಲ್ಲ. ಹೊಸ ಸಂವಿಧಾನ ಬೇಕು ಎಂದು ಹೇಳುವ ಮೂಲಕ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಬಿಆರ್‌ಎಸ್‌ ಅವಮಾನ ಮಾಡಿತು. ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ದಲಿತ ನಾಯಕ ಜಿತನ್‌ ರಾಮ್‌ ಮಾಂಝಿ ಅವರಿಗೆ ಅವಮಾನ ಮಾಡಿದ್ದಾರೆ. ಇವೆಲ್ಲ ಅಂಶಗಳು ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳು ದಲಿತರನ್ನು ಹೇಗೆ ನಡೆಸಿಕೊಂಡವು ಎಂಬುದಕ್ಕ ಉದಾಹರಣೆ” ಎಂದು ಮೋದಿ ಹೇಳಿದರು. ತೆಲಂಗಾಣದಲ್ಲಿ ನವೆಂಬರ್‌ 30ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version