Site icon Vistara News

PM Narendra Modi: I.N.D.I.Aದ ಪೂರ್ಣ ರೂಪ ಅವರಿಗೇ ಗೊತ್ತಿಲ್ಲ: ಎನ್‌ಡಿಎ ಸಂಸದರ ಸಭೆಯಲ್ಲಿ ಮೋದಿ ಹೇಳಿದ್ದೇನು?

pm modi meets nda mps

ಹೊಸದಿಲ್ಲಿ: ʼʼಬಡತನ ಎಲ್ಲಕ್ಕಿಂತ ದೊಡ್ಡ ಜಾತಿ ವ್ಯವಸ್ಥೆ. ಅದನ್ನು ಹೋಗಲಾಡಿಸಲು ನಾವು ಮಾಡಿರುವ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ವ್ಯವಸ್ಥಿತ ಕಾರ್ಯಯೋಜನೆ ರೂಪಿಸಿಕೊಳ್ಳಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಎನ್‌ಡಿಎ ಸಂಸದರ ಸಭೆಯಲ್ಲಿ (NDA MPs Meet) ಕಿವಿಮಾತು ಹೇಳಿದ್ದಾರೆ.

ಮುಂಬರುವ 2024ರ ಲೋಕಸಭೆ ಚುನಾವಣೆಯ (Loksabha election) ಗೆಲುವಿಗೆ ಎನ್‌ಡಿಎ ಮೈತ್ರಿಕೂಟ (NDA alliance) ಕ್ರಿಯಾಯೋಜನೆ ರೂಪಿಸುತ್ತಿದ್ದು, ಇತ್ತೀಚಿನ ಕ್ಲಸ್ಟರ್ ಸಭೆಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಬುಧವಾರ ಉತ್ತರ ಪ್ರದೇಶ ಮತ್ತು ದಕ್ಷಿಣದ ರಾಜ್ಯಗಳ ಎನ್‌ಡಿಎ ಸಂಸದರ ಸಭೆ ನಡೆಯಿತು. ಮೊದಲು ಉತ್ತರ ಪ್ರದೇಶದ 45ಕ್ಕೂ ಹೆಚ್ಚು ಎನ್‌ಡಿಎ ಸಂಸದರ ಸಭೆ, ಬಳಿಕ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಎನ್‌ಡಿಎ ಸಂಸದರ ಸಭೆ ನಡೆಯಿತು. ಎರಡನ್ನೂ ಉದ್ದೇಶಿಸಿ ಮೋದಿ ಮಾತನಾಡಿದರು.

ಪ್ರಧಾನಿ ಮೋದಿ ಅವರು ಪೂರ್ವ ಉತ್ತರಪ್ರದೇಶದ ವಾರಣಾಸಿಯ ಚುನಾಯಿತ ಲೋಕಸಭಾ ಸಂಸದರೂ ಹೌದು. ಸಭೆಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಇದ್ದರು. ದಕ್ಷಿಣ ಭಾರತೀಯ ಎಂಪಿಗಳ ಸಭೆಯಲ್ಲಿ ಪ್ರಹ್ಲಾದ್‌ ಜೋಶಿ, ಮುರಳೀಧರನ್‌ ಇದ್ದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರತ್ತ ಕೊಂಡೊಯ್ಯುವುದು, ವಿರೋಧಪಕ್ಷಗಳಿಂದ ಹರಡುತ್ತಿರುವ ವದಂತಿಗಳನ್ನು ಹೋಗಲಾಡಿಸುವುದು ಮುಖ್ಯ. ಪ್ರತಿಪಕ್ಷಗಳ ಸುಳ್ಳು ಆರೋಪಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ವೃತ್ತಿಪರ ಸಾಮಾಜಿಕ ಮಾಧ್ಯಮ ತಂಡಗಳೊಂದಿಗೆ ಕೈಜೋಡಿಸಿ ಕಾರ್ಯಾಚರಿಸಿ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರಿ. ಡಿಜಿಟಲ್ ಜಗತ್ತಿನಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ವೃತ್ತಿಪರ ಸಾಮಾಜಿಕ ಮಾಧ್ಯಮ ತಜ್ಞರ ಸೇವೆ ಪಡೆಯಿತಿ ಎಂದು ಸಂಸದರಿಗೆ ಪ್ರಧಾನಿ ಮೋದಿ ಸಲಹೆ ನೀಡಿದರು.

ಎನ್‌ಡಿಎ ಸರ್ಕಾರ ಮಾಡಿದ ಕೆಲಸಗಳ ಬಗ್ಗೆ ಸ್ಥಳೀಯರೊಂದಿಗೆ ಸಂಸದರು ಸಂವಹನ ನಡೆಸಬೇಕಾದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ನಿಮ್ಮ ಪ್ರತಿಯೊಂದು ಕ್ಷೇತ್ರದಲ್ಲಿ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಿ. ಬಡತನವೇ ದೊಡ್ಡ ಜಾತಿ. ಅದರ ನಿರ್ಮೂಲನೆಗೆ ಪ್ರಯತ್ನಿಸಿ. ರಾಮಮಂದಿರದ ಭರವಸೆಯು ಬಿಜೆಪಿಯ ವಿಚಾರಧಾರೆಯಿಂದ ಹುಟ್ಟಿದೆ. ಆದರೆ ಅದು ಮತಗಳನ್ನು ಭದ್ರಪಡಿಸುತ್ತದೆ ಎಂದು ಭಾವಿಸಿ ಸಂಸದರು ಸುಮ್ಮನಾಗಲು ಸಾಧ್ಯವಿಲ್ಲ. ಸರ್ಕಾರದ ಸಾಧನೆಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಿ. 370ನೇ ವಿಧಿ ರದ್ದತಿ ಮತ್ತು ರಾಮಮಂದಿರ ಬಿಜೆಪಿಯ ಬದ್ಧತೆಯ ಭಾಗವಾಗಿದೆ ಎಂಬುದು ನಿಜವಾದರೂ, ಮತಗಳನ್ನು ಭದ್ರಪಡಿಸಿಕೊಳ್ಳಲು ಜನರಿಗಾಗಿ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಮೋದಿ ಹೇಳಿದರು.

ದಕ್ಷಿಣ ಭಾರತದ ಸಂಸದರೊಂದಿಗೆ ನಡೆದ ಸಂವಾದದಲ್ಲಿ, ಕಳೆದ ಒಂಬತ್ತು ವರ್ಷಗಳಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿದ ಪ್ರಧಾನಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಹೆಚ್ಚಿರುವ ಭ್ರಷ್ಟಾಚಾರದ ಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಪ್ರತಿಪಕ್ಷಗಳ ನೇತೃತ್ವದ ರಾಜ್ಯಗಳಲ್ಲಿ ಪ್ರಚಲಿತದಲ್ಲಿರುವ ಉಚಿತ ಹಂಚುವ ಸಂಸ್ಕೃತಿಯನ್ನು ವಿರೋಧಿಸಬೇಕು ಎಂದು ಪ್ರಧಾನಿ ಎನ್‌ಡಿಎ ಸದಸ್ಯರನ್ನು ಒತ್ತಾಯಿಸಿದರು. ಇಂತಹ ಅಭ್ಯಾಸಗಳು ದೀರ್ಘಾವಧಿಯಲ್ಲಿ ದೇಶಕ್ಕೆ ಗಮನಾರ್ಹ ನಷ್ಟಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು.

ಪ್ರತಿಪಕ್ಷಗಳ ಒಕ್ಕೂಟದ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ ಮೋದಿ, ಸ್ವಾರ್ಥಪೂರಿತ ಅಜೆಂಡಾದ ಮೂಲಕ ಮೈತ್ರಿ ಮಾಡಿಕೊಳ್ಳಲಾಗಿದೆ. ನಾನು ವಿರೋಧ ಪಕ್ಷದ ಸಂಸದರಿಗೆ ಸವಾಲು ಹಾಕಬಲ್ಲೆ. ಅವರಲ್ಲಿ ಯಾರಿಗಾದರೂ ಕೇಳಿ, I.N.D.I.Aದ ಪೂರ್ಣ ರೂಪ ಏನು ಎಂಬುದು ಒಬ್ಬರಿಗೂ ತಿಳಿದಿರುವುದಿಲ್ಲ ಎಂದು ಮಹಾಮೈತ್ರಿಯನ್ನು ಪ್ರಧಾನಿ ವ್ಯಂಗ್ಯವಾಡಿದರು.

ಇದನ್ನೂ ಓದಿ: CM Siddaramaiah : ಮೋದಿಯವರೇ ತಾಕತ್ತಿದ್ದರೆ ಗ್ಯಾರಂಟಿಗಳ ವಿರುದ್ಧ ಹೋರಾಟ ಘೋಷಿಸಿ; ಸಿದ್ದರಾಮಯ್ಯ ಸವಾಲು

Exit mobile version