ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಹತ್ಯೆ ಮಾಡುವುದಾಗಿ (modi killing threat) ಮತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವನ್ನು (Narendra Modi Stadium) ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದ್ದು, ಭಾರತೀಯ ಭದ್ರತಾ ಏಜೆನ್ಸಿಗಳು ಇನ್ನಷ್ಟು ಅಲರ್ಟ್ ಆಗಿವೆ.
ರಾಷ್ಟ್ರೀಯ ತನಿಖಾ ಸಂಸ್ಥೆ (national investigation agency- NIA) ಮುಂಬೈ ಪೊಲೀಸರಿಗೆ ಈ ಬೆದರಿಕೆ ಇಮೇಲ್ ಬಗ್ಗೆ ತಕ್ಷಣ ಎಚ್ಚರಿಕೆ ನೀಡಿದೆ. ಇದನ್ನು ಗುಜರಾತ್ ಪೊಲೀಸರು ಹಾಗೂ ಪ್ರಧಾನಿಯ ಭದ್ರತೆಗೆ ಸಂಬಂಧಿಸಿದ ವಿವಿಧ ಏಜೆನ್ಸಿಗಳೊಂದಿಗೂ ಹಂಚಿಕೊಳ್ಳಲಾಗಿದೆ.
ಎನ್‌ಐಎ ಪಡೆದುಕೊಂಡಿರುವ ಇಮೇಲ್‌ನಲ್ಲಿ, ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನನ್ನು (Lawrence Bishnoi) ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಲಾಗಿದೆ. ಜೊತೆಗೆ 500 ಕೋಟಿ ರೂ. ನೀಡಬೇಕು ಎಂದು ಬೇಡಿಕೆ ಇಡಲಾಗಿದೆ. ಇಲ್ಲವಾದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ, ಅಹಮದಾಬಾದ್‌ನ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದೆ.
ಗುರುವಾರ ಬೆಳಗ್ಗೆ ಮುಂಬಯಿಯ ಪೊಲೀಸ್ ನಿಯಂತ್ರಣ ಕೊಠಡಿಗೆ ಎನ್‌ಐಎಯಿಂದ ಎಚ್ಚರಿಕೆಯ ಸಂದೇಶ ಬಂದಿದೆ. ಇಮೇಲ್‌ನ ಮೂಲವನ್ನು ಪತ್ತೆ ಹಚ್ಚಲು ಭದ್ರತಾ ಏಜೆನ್ಸಿಗಳು ಮುಂದಾಗಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಐದು ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿರುವುದರಿಂದ ಮುಂಬೈ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಉದ್ಘಾಟನಾ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯಿತು.
ʼʼನಿಮ್ಮ ಸರ್ಕಾರ ನಮಗೆ ರೂ. 500 ಕೋಟಿ ನೀಡಬೇಕು. ಲಾರೆನ್ಸ್ ಬಿಷ್ಣೋಯ್‌ನನ್ನು ಬಿಡುಗೆ ಮಾಡಬೇಕು. ಇಲ್ಲವಾದರೆ ನಾವು ನರೇಂದ್ರ ಮೋದಿ ಹತ್ಯೆ ಮಾಡುತ್ತೇವೆ ಮತ್ತು ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಸ್ಫೋಟಿಸುತ್ತೇವೆ. ಹಿಂದುಸ್ತಾನದಲ್ಲಿ ಎಲ್ಲವೂ ಮಾರಾಟವಾಗುತ್ತದೆ. ಹಾಗಾಗಿ ನಾವೂ ಇದನ್ನು ʼಖರೀದಿಸಲುʼ ನಿರ್ಧರಿಸಿದ್ದೇವೆ. ನೀವು ಎಷ್ಟೇ ಭದ್ರತೆ ಪಡೆದುಕೊಂಡರೂ ನಮ್ಮಿಂದ ಸುರಕ್ಷಿತವಾಗಿರಲು ಸಾಧ್ಯವಿಲ್ಲ” ಎಂದು ಇಮೇಲ್‌ನಲ್ಲಿ ಬರೆಯಲಾಗಿದೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ 2014ರಿಂದ ಜೈಲಿನಲ್ಲಿದ್ದಾನೆ. ಜೈಲಿನ ಒಳಗಿನಿಂದಲೇ ಗ್ಯಾಂಗ್ ಅನ್ನು ನಿರ್ವಹಿಸುತ್ತಿದ್ದಾನೆ. ಪಂಜಾಬಿನಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಕಳೆದ ವರ್ಷ, ಮೂಸೆವಾಲಾ ಮೇಲಿನ ದಾಳಿಯ ಹೊಣೆಯನ್ನು ಬಿಷ್ಣೋಯ್ ವಹಿಸಿಕೊಂಡಿದ್ದ. ಈ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್‌ನನ್ನು (Salman khan) ಜೈಲಿನಿಂದ ಬಿಡುಗಡೆ ಮಾಡುವಂತೆ, ಕೃಷ್ಣಮೃಗ ಹತ್ಯೆ ಘಟನೆಯಲ್ಲಿ ತನ್ನ ಸಮುದಾಯದ ಸಲ್ಮಾನ್ ಮೇಲೆ ಕೋಪಗೊಂಡಿದ್ದು, ನಟನ ಮೇಲೆ ಸೇಡು ತೀರಿಸಿಕೊಳ್ಳುವ ಹೊಣೆ ತಾನು ವಹಿಸಿಕೊಳ್ಳುವುದಾಗಿ ಹೇಳಿದ್ದ.
ಇದನ್ನೂ ಓದಿ: Lawrence Bishnoi: ಸಲ್ಮಾನ್ ಖಾನ್ ಹತ್ಯೆಗೆ ಕಾದು ಕುಳಿತಿರುವ ಲಾರೆನ್ಸ್ ಬಿಷ್ಣೋಯಿಗೆ ತೀವ್ರ ಅನಾರೋಗ್ಯ