ಬೆಂಗಳೂರು: ಇಸ್ರೋದಲ್ಲಿ (ISRO) ಇಂದು ಮುಂಜಾನೆ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಲು ಆರಂಭಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಗಂಟಲು ಕಟ್ಟಿತು. ಅವರ ಧ್ವನಿಯು ಆರ್ದ್ರವಾಗಿದ್ದುದು ಗೊತ್ತಾಯಿತು. ಚಂದ್ರಯಾನ 3 (Chandrayaan 3) ಯಶಸ್ಸಿನ ಪುಳಕ, ವಿಜ್ಞಾನಿಗಳ ಬಗ್ಗೆ ಹಮ್ಮೆ, ಭಾವುಕತೆ, ಎಲ್ಲವೂ ಅವರ ಧ್ವನಿಯಲ್ಲಿ ಮೇಳೈಸಿತ್ತು.
ಚಂದ್ರಯಾನದ ಲ್ಯಾಂಡರ್ ಚಂದ್ರನಲ್ಲಿ ಇಳಿಯುವ ವೇಳೆಗೆ ನಾನು ದೂರದ ವಿದೇಶದಲ್ಲಿದ್ದೆ. ನಿಮ್ಮ ಸಾಧನೆ ನೋಡಿ ನನಗೂ ಅಲ್ಲಿದ್ದಾಗ ನನ್ನನ್ನು ನಾನು ನಿಯಂತ್ರಣ ಮಾಡಿಕೊಳ್ಳಲಾಗಲಿಲ್ಲ. ನಾನು ಭಾರತಕ್ಕೆ ಮರಳಿದಾಗ ಮೊದಲು ಬೆಂಗಳೂರಿಗೆ ಹೋಗಬೇಕು ಅಂತ ನಿರ್ಧರಿಸಿದೆ. ಎಲ್ಲರಿಗಿಂತ ಮೊದಲು ನಿಮಗೆ ನಮಸ್ಕರಿಸುತ್ತೇನೆ ಎಂದು ವಿಜ್ಞಾನಿಗಳನ್ನು ಉದ್ದೇಶಿಸಿ ಅವರು ನುಡಿದರು.
ನಿಮ್ಮ ಧೈರ್ಯ, ನಿಮ್ಮ ಪರಿಶ್ರಮ, ನಿಮ್ಮ ಧೀಮಂತಿಕೆ, ಜೀವಂತಿಕೆಗೆ ನನ್ನ ಸೆಲ್ಯೂಟ್. ಇವು ಇಂದು ನಮ್ಮ ಗೆಲುವಿಗೆ ಕಾರಣವಾಗಿವೆ ಎಂದು ಹೇಳುವಾಗ ಮೋದಿಯವರ ಧ್ವನಿ ಕಟ್ಟಿತು. ಭಾರತವನ್ನು ಮೂರನೇ ಜಗತ್ತಿನ ದೇಶ ಎಂದು ಕರೆಯಲಾಗುತ್ತಿತ್ತು. ಇಂದು ನಾವು ಮೊದಲ ಸಾಲಿಗೆ ಬಂದು ನಿಂತಿದ್ದೇವೆ. ಮೂರನೇ ಸಾಲಿನಿಂದ ಮೊದಲ ಸಾಲಿಗೆ ಬರಲು (ಥರ್ಡ್ ರೋ ಟೂ ಫಸ್ಟ್ ರೋ) ಇಸ್ರೋ ಕಾರಣವಾಗಿದೆ. ಇಸ್ರೋದಂಥ ಸಂಸ್ಥೆಯ ಕೊಡುಗೆ ಈ ಸಾಧನೆಯಲ್ಲಿ ಇದೆ. ನೀವು ನಮ್ಮ ಮೇಕ್ ಇನ್ ಇಂಡಿಯಾವನ್ನು ಚಂದ್ರನವರೆಗೆ ತಲುಪಿಸಿದ್ದೀರಿ ಎಂದು ಮೋದಿ ಶ್ಲಾಘಿಸಿದರು.
ʼಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ʼ ಎಂಬ ಘೋಷಣೆಯನ್ನು ಅವರು ಮೊಳಗಿಸಿದರು.