ಜಕಾರ್ತ: 20ನೇ ಆಸಿಯಾನ್-ಭಾರತ ಶೃಂಗಸಭೆ ಹಾಗೂ 18ನೇ ಪೂರ್ವ ಏಷ್ಯಾ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂಡೋನೇಷ್ಯಾಗೆ ಭೇಟಿ (PM Modi Indonesia Visit) ನೀಡಿದ್ದು, ಅಲ್ಲಿನ ಸರ್ಕಾರ ಹಾಗೂ ಅನಿವಾಸಿ ಭಾರತೀಯರಿಂದ ಅದ್ಧೂರಿ ಸ್ವಾಗತ ದೊರೆತಿದೆ. ಬುಧವಾರ (ಸೆಪ್ಟೆಂಬರ್ 6) ರಾತ್ರಿಯೇ ಮೋದಿ ಅವರು ವಿಮಾನ ಹತ್ತಿದ್ದು, ಗುರುವಾರ ಬೆಳಗ್ಗೆ ಇಂಡೋನೇಷ್ಯಾ ತಲುಪಿದರು.
ನರೇಂದ್ರ ಮೋದಿ ಅವರು ಇಂಡೋನೇಷ್ಯಾ ತಲುಪುತ್ತಲೇ ಅಲ್ಲಿನ ಸರ್ಕಾರದಿಂದ ಸಾಂಪ್ರದಾಯಿಕವಾಗಿ ಸ್ವಾಗತ ದೊರೆಯಿತು. ಇನ್ನು ಅನಿವಾಸಿ ಭಾರತೀಯರಂತೂ ನರೇಂದ್ರ ಮೋದಿ ಅವರಿಗಾಗಿ ಕಾದು, ಪ್ರಧಾನಿಯನ್ನು ಸ್ವಾಗತಿಸಿದರು. ಹೆಣ್ಣುಮಕ್ಕಳು, ಮಕ್ಕಳು, ಯುವಕರು ಮೋದಿ ಅವರನ್ನು ಸ್ವಾಗತಿಸಿದರು. ಇದೇ ವೇಳೆ ಮೋದಿ ಅವರು ಅನಿವಾಸಿ ಭಾರತೀಯರೊಂದಿಗೆ ಉಭಯ ಕುಶಲೋಪರಿ ನಡೆಸಿದರು.
ಮೋದಿಗೆ ಅದ್ಧೂರಿ ಸ್ವಾಗತ
ಇದಾದ ಬಳಿಕ 20ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪಾಲ್ಗೊಂಡ ಮೋದಿ ಹಲವು ವಿಷಯಗಳ ಕುರಿತು ಮಾತನಾಡಿದರು. “ಭಾರತ ಹಾಗೂ ಆಸಿಯಾನ್ ರಾಷ್ಟ್ರಗಳ ಸಂಬಂಧ, ವ್ಯೂಹಾತ್ಮಕ ಬಂಧವು ನಾಲ್ಕು ದಶಕಗಳನ್ನು ಪೂರೈಸಿದೆ. ಶೃಂಗಸಭೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಸಭೆ ಆಯೋಜಿಸಿದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಅವರಿಗೆ ಧನ್ಯವಾದಗಳು” ಎಂದರು.
ಆಸಿಯಾನ್ ಸಭೆಯಲ್ಲಿ ಪ್ರಧಾನಿ ಮಾತು
ಇದನ್ನೂ ಓದಿ: Praggnanandhaa: ತವರಿಗೆ ಮರಳಿದ ಪ್ರಜ್ಞಾನಂದಗೆ ಅದ್ಧೂರಿ ಸ್ವಾಗತ
“ನಮ್ಮ ಇತಿಹಾಸ, ಭೌಗೋಳಿಕ ವ್ಯಾಪ್ತಿಯು ಭಾರತ ಹಾಗೂ ಆಸಿಯಾನ್ ರಾಷ್ಟ್ರಗಳನ್ನು ಒಗ್ಗೂಡಿಸುತ್ತದೆ. ಹಾಗಾಗಿಯೇ, ಆಸಿಯಾನ್ ರಾಷ್ಟ್ರಗಳ ಸಂಬಂಧವು ವೃದ್ಧಿಯಾಗಿದೆ. ಆಸಿಯಾನ್ ರಾಷ್ಟ್ರಗಳ ಅಭಿವೃದ್ಧಿ, ಶಾಂತಿ, ಸ್ಥಿರತೆಯು ನಮ್ಮ ಆದ್ಯತೆಯಾಗಿದೆ. ಜಾಗತಿಕ ಏಳಿಗೆಗೆ ಆಸಿಯಾನ್ ರಾಷ್ಟ್ರಗಳ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲೂ ಇದೇ ಗುರಿಯೊಂದಿಗೆ ಸಾಗೋಣ” ಎಂದು ಮೋದಿ ಹೇಳಿದರು.