ಹೊಸದಿಲ್ಲಿ: ಕೇಂದ್ರ ಬಿಜೆಪಿ ಸರ್ಕಾರದ ಕಲ್ಯಾಣ ಯೋಜನೆಗಳು ಅಂತಿಮವಾಗಿ ಫಲಾನುಭವಿಗಳಿಗೆ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಿ ಎಂದು ತಮ್ಮ ಸಚಿವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಕಿವಿಮಾತು ಹೇಳಿದ್ದಾರೆ.
ದೆಹಲಿಯ ಪ್ರಗತಿ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾದ ಕನ್ವೆನ್ಷನ್ ಸೆಂಟರ್‌ನಲ್ಲಿ ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ʼʼಐದು ಗಂಟೆಗಳ ಕಾಲ ನಡೆದ ಸಭೆ ಫಲಪ್ರದವಾಗಿದೆ. ಇದರಲ್ಲಿ ಸಚಿವರು ವಿವಿಧ ನೀತಿ ಸಂಬಂಧಿತ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರುʼʼ ಎಂದು ಪ್ರಧಾನಿ ಮೋದಿ ನಂತರ ಟ್ವೀಟ್ ಮಾಡಿದರು.
ಕ್ಯಾಬಿನೆಟ್ ಮೀಟ್‌ನಲ್ಲಿ ಮಂತ್ರಿಗಳಿಗೆ ಪ್ರಧಾನಿ ಮೋದಿ ‘ವಿಷನ್ 2047’ ಗುರಿ ನೀಡಿದ್ದಾರೆ. “ಎಲ್ಲರೂ ಪ್ರಸ್ತುತ ಸಮಯ ಅಥವಾ ಮುಂದಿನ ವರ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಮುಂದಿನ 25 ವರ್ಷಗಳ ಅಂದರೆ 2047ರ ದೃಷ್ಟಿಯೊಂದಿಗೆ ಕೆಲಸ ಮಾಡಬೇಕು ಎಂದು ಮೋದಿ ಸಭೆಯಲ್ಲಿ ಸಚಿವರಿಗೆ ಸೂಚಿಸಿದರು.
ಸರ್ಕಾರದ ಹಲವಾರು ಕಲ್ಯಾಣ ಯೋಜನೆಗಳು ದೇಶಾದ್ಯಂತ ಫಲಾನುಭವಿಗಳನ್ನು ಹೊಂದಿದ್ದು, ಕೊಟ್ಟಕೊನೆಯ ಫಲಾನುಭವಿಯೂಳು ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವವರೆಗೆ ಅವುಗಳನ್ನು ಮುಂದುವರಿಸಬೇಕು. ಯೋಜನೆಗಳನ್ನು ಪ್ರಾರಂಭಿಸುವುದು ಸಾಕಾಗದು. ಸಚಿವರುಗಳು ಅದನ್ನು ಜಿಲ್ಲಾ ಮಟ್ಟಕ್ಕೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಪಕ್ಷದ ಕಾರ್ಯಕರ್ತರು ಅತ್ಯಂತ ತಳಮಟ್ಟದಲ್ಲಿ ನಾಗರಿಕರೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಮೋದಿ ಹೇಳಿದರು.
ಹಿಂದಿನ ಕೆಲವು ಸರ್ಕಾರಗಳಂತೆ ನಾವು ಸಮೀಪದೃಷ್ಟಿ ಹೊಂದಿರಬಾರದು. ಹಲವು ರಾಜಕೀಯ ಪಕ್ಷಗಳು 2024ರತ್ತ ಗಮನ ಹರಿಸಿದರೆ, ನಮ್ಮ ಸರ್ಕಾರ ಮುಂದಿನ 25 ವರ್ಷಗಳ ಭಾರತಕ್ಕಾಗಿ ಕೆಲಸ ಮಾಡುತ್ತಿದೆ. ಭಾರತದ ಪ್ರಜಾಪ್ರಭುತ್ವ ಮತ್ತು ಇತಿಹಾಸದಲ್ಲಿ ಕಳೆದ 50 ವರ್ಷಗಳು ಬಹಳ ಮುಖ್ಯವಾದವು. ಹಾಗೆಯೇ ಮುಂಬರುವ 50 ವರ್ಷಗಳಲ್ಲಿ ವೈಭವಯುತ ಭಾರತ ನಿರ್ಮಾಣಕ್ಕಾಗಿ ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಮುಂಬರುವ ದಿನಗಳಲ್ಲಿ ಮತದಾರರು ಬುದ್ಧಿವಂತರಾಗಿರುತ್ತಾರೆ. ಮತದಾರರು ತಮ್ಮ ಹಕ್ಕುಗಳು ಮತ್ತು ಸವಲತ್ತುಗಳ ಬಗ್ಗೆ ಚೆನ್ನಾಗಿ ಅರಿವು ಹೊಂದಿರುತ್ತಾರೆ. ಸರ್ಕಾರದಿಂದ ಅದಕ್ಕಾಗಿ ಬೇಡಿಕೆಯಿಡುತ್ತಾರೆ. ಆದ್ದರಿಂದ ಯಾವುದೇ ಸರ್ಕಾರ ಅವರ ನಿರೀಕ್ಷೆಗಳನ್ನು ಪೂರೈಸುವುದು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಮಾಹಿತಿಪೂರ್ಣ ಪ್ರೆಸೆಂಟೆಶನ್‌ಗಳು ಇದ್ದವು. ಅಮಿತ್ ಶಾ, ಪೀಯೂಷ್ ಗೋಯಲ್. ನಿತಿನ್ ಗಡ್ಕರಿ ಸೇರಿದಂತೆ ಕ್ಯಾಬಿನೆಟ್ ಸಚಿವರು, ರಾಜ್ಯ ಸಚಿವರು ಮತ್ತು ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: Narendra Modi: ಮೋದಿ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಡ್ರೋನ್ ಹಾರಾಟ; ಸಂಚಿನ ಶಂಕೆ, ತೀವ್ರ ತನಿಖೆ