Site icon Vistara News

PM Narendra Modi in Ayodhya: ಪಿಎಂ ಮೋದಿಯಿಂದ ಅಯೋ‌ಧ್ಯೆ ಏರ್‌ಪೋರ್ಟ್ ಉದ್ಘಾಟನೆ

modi in maharshi valmiki international airport

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Maharishi Valmiki International Airport) ಉದ್ಘಾಟಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ನಾಗರಿಕ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಜೊತೆಗಿದ್ದರು.

ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಸಮಗ್ರ ನಕ್ಷೆಯನ್ನು ಅವರು ಅವಲೋಕಿಸಿದರು. ವಿಮಾನ ನಿಲ್ದಾಣದಲ್ಲಿ ಆದ ನೂತನ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು. ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಇದನ್ನು ವಿವರಿಸಿದರು. ಅಯೋಧ್ಯೆಯ ವಿಮಾನ ನಿಲ್ದಾಣದ ಉದ್ಘಾಟನೆಯ ಬಳಿಕ ಹೊರಟ ಮೊದಲ ವಿಮಾನದಲ್ಲಿ ʼಜೈ ಶ್ರೀರಾಮ್‌ʼ ಘೋಷಣೆಗಳು ಮೊಳಗಿದವು.

ಇದಕ್ಕೂ ಮುನ್ನ ಅವರು ನವೀಕರಿಸಿದ ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು ಉದ್ಘಾಟಿಸಿದರು ಮತ್ತು ಆರು ವಂದೇ ಭಾರತ್ ಮತ್ತು ಎರಡು ಅಮೃತ್ ಭಾರತ್ ರೈಲುಗಳಿಗೆ ಧ್ವಜಾರೋಹಣ ಮಾಡಿದರು. ಮುಂಜಾನೆ 10.40ರ ಸುಮಾರಿಗೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಅಲ್ಲಿಂದ 5 ಕಿಲೋಮೀಟರ್‌ ದೂರ ರೋಡ್‌ ಶೋ ನಡೆಸಿದರು.

ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ದಾರಿಯಲ್ಲಿ ಅವರು ಲತಾ ಮಂಗೇಶ್ಕರ್‌ ಚೌಕವನ್ನು ಸಂದರ್ಶಿಸಿದರಲ್ಲದೆ, ನೆರೆದಿದ್ದ ಜನರತ್ತ ಮಂದಸ್ಮಿತರಾಗಿ ಕೈಬೀಸಿದರು. ದಾರಿಯಲ್ಲಿ ಉಜ್ವಲ ಫಲಾನುಭವಿಗಳ ಮನೆಯನ್ನೂ ಸಂದರ್ಶಿಸಿದರು.

ವಿಮಾನ ನಿಲ್ದಾಣ ಉದ್ಘಾಟನೆಯ ಬಳಿಕ ಅವರು ₹ 15,700 ಕೋಟಿ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಇತರ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಜನವರಿ 22ರಂದು ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಅದಕ್ಕಾಗಿ ಆಗಮಿಸಲಿರುವ ಲಕ್ಷಾಂತರ ಭಕ್ತರಿಗೆ ರೈಲು ನಿಲ್ದಾಣ ಹಾಗೂ ಏರ್‌ಪೋರ್ಟ್‌ ಪೂರಕವಾಗಲಿವೆ.

ಅಯೋಧ್ಯೆಯ ಅತ್ಯಾಧುನಿಕ ವಿಮಾನ ನಿಲ್ದಾಣದ 1ನೇ ಹಂತವನ್ನು ₹1,450 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು 6,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸುಸಜ್ಜಿತವಾಗಿದೆ. ಟರ್ಮಿನಲ್ ಕಟ್ಟಡದ ಮುಂಭಾಗವು ಅಯೋಧ್ಯೆಯಲ್ಲಿ ನಿರ್ಮಿತವಾಗುತ್ತಿರುವ ಶ್ರೀ ರಾಮ ಮಂದಿರದ ದೇವಾಲಯದ ವಾಸ್ತುಶಿಲ್ಪವನ್ನು ಬಿಂಬಿಸುವತಿದೆ.

ಅಯೋಧ್ಯೆ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ನಿರೋಧಕ ಛಾವಣಿಯ ವ್ಯವಸ್ಥೆ, ಎಲ್ಇಡಿ ಲೈಟಿಂಗ್, ಮಳೆನೀರು ಕೊಯ್ಲು, ಕಾರಂಜಿಗಳೊಂದಿಗೆ ಭೂದೃಶ್ಯ, ನೀರಿನ ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ಸೌರ ವಿದ್ಯುತ್ ಸ್ಥಾವರ ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. GRIHA – 5-ಸ್ಟಾರ್ ರೇಟಿಂಗ್‌ಗಳನ್ನು ಪೂರೈಸುತ್ತದೆ. ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸಲಿದೆ. ಇದು ಪ್ರವಾಸೋದ್ಯಮ, ವ್ಯಾಪಾರ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶಗಳಲ್ಲಿ ಉತ್ತೇಜನಕ್ಕೆ ಕಾರಣವಾಗಲಿದೆ.

11.30ರ ಸುಮಾರಿಗೆ ನೂತನ ಅಯೋಧ್ಯಾ ಧಾಮ್‌ ರೈಲ್ವೆ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿದರು. ಅವರ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದತ್ಯನಾಥ್‌, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಉತ್ತರಪ್ರದೇಶ ರಾಜ್ಯಪಾಲ ಆನಂದಿ ಬೆನ್‌ ಉಪಸ್ಥಿತರಿದ್ದರು. ರೈಲ್ವೆ ನಿಲ್ದಾಣದ ಜೊತೆಗೆ ಹೊಸ ಅಮೃತ್ ಭಾರತ್ ರೈಲುಗಳು ಮತ್ತು ವಂದೇ ಭಾರತ್ ರೈಲುಗಳನ್ನು ಫ್ಲ್ಯಾಗ್ ಆಫ್ ಮಾಡಿದರು.

ಈದಕ್ಕೂ ಮುನ್ನ ಪ್ರಧಾನಿ ಮೋದಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ 10.40ರ ಸುಮಾರಿಗೆ ಅವರು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ನಂತರ ತೆರೆದ ವಾಹನದಲ್ಲಿ ರೋಡ್‌ ಶೋ ಮಾಡಿದರು. ರೋಡ್‌ ಶೋ ನಡೆದ ರಸ್ತೆಯ ಎರಡೂ ಕಡೆಗಳಲ್ಲಿ ಸಾವಿರಾರು ಜನ ನೆರೆದು ಮೋದಿಯವರನ್ನು ಪುಷ್ಪಾರ್ಚನೆ ಹಾಗೂ ಜಯಘೋಷಗಳಿಂದ ಸ್ವಾಗತಿಸಿದರು. ದೇಶದ ನಾನಾ ಕಡೆಗಳಿಂದ ಬಂದ ಸಾಂಸ್ಕೃತಿಕ ಕಲಾ ತಂಡಗಳು ದಾರಿಯುದ್ದಕ್ಕೂ ತಮ್ಮ ಕಲಾ ಪ್ರದರ್ಶನಗಳನ್ನು ನೀಡಿ ನೋಡುಗರ ಮನ ಸೂರೆಗೊಂಡವು.

ಜನವರಿ 16ರಿಂದ ಪ್ರಾರಂಭವಾಗುವ ಏಳು ದಿನಗಳ ದೀರ್ಘಾವಧಿಯ ಪವಿತ್ರ ಮಾಸದಲ್ಲಿ ರಾಮ ಮಂದಿರದ ಉದ್ಘಾಟನೆಗೆ ನಗರವನ್ನು ಅಲಂಕರಿಸಲಾಗಿದೆ. 51 ಇಂಚು ಎತ್ತರದ ಭಗವಾನ್ ರಾಮನ ವಿಗ್ರಹವನ್ನು ಭವ್ಯ ದೇವಾಲಯದ ಗರ್ಭಗುಡಿಯೊಳಗೆ ಸ್ಥಾಪಿಸಲಾಗುವುದು. ಮೂರು ವಿಭಿನ್ನ ವಿನ್ಯಾಸಗಳಲ್ಲಿ ಭಗವಾನ್ ರಾಮನ ವಿಗ್ರಹವನ್ನು ಆಯ್ಕೆ ಮಾಡಲು ನಿನ್ನೆ ಮತದಾನ ನಡೆದಿದ್ದು, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ʼಪ್ರಾಣ ಪ್ರತಿಷ್ಠಾ’ಕ್ಕೆ ತರಲಾಗುವ ಒಂದನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ.

ಇದನ್ನೂ ಓದಿ: New Trains : ರಾಜ್ಯದ ಮೂರು ಹೊಸ ರೈಲುಗಳಿಗೆ ಮೋದಿ ಚಾಲನೆ; ಎಲ್ಲಿಂದ ಎಲ್ಲಿಗೆ ಓಡುತ್ತೆ?

Exit mobile version