ಅಬುಧಾಬಿ: ಯುಎಇ (UAE) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಬುಧಾಬಿಯಲ್ಲಿ (Abu Dhabi Hindu Temple) ನಿರ್ಮಾಣ ಮಾಡಲಾಗಿರುವ ಬಿಎಪಿಎಸ್ ಹಿಂದೂ ದೇವಾಲಯವನ್ನು ಉದ್ಘಾಟಿಸಿದರು. ಇದು ಯುಎಇ ದೇಶದ ಮೊದಲ ಹಿಂದೂ ದೇಗುಲವಾಗಿದೆ(UAE Temple Inauguration).
ಈ ಹಿಂದೂ ದೇಗುಲ ಲೋಕಾರ್ಪಣೆಯ ಹಲವು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡರು. ಆರತಿ ವಿಧಿವಿಧಾನವನ್ನು ಪೂರ್ಣಗೊಳಿಸಿದರು. ದೇವರ ಪಾದಾರವಿಂದಗಳಿಗೆ ಪುಷ್ಪಸಮರ್ಪಿಸಿದರು.
ದೇವಾಲಯವನ್ನು ಪ್ರವೇಶಿಸುವ ಮುನ್ನ ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಈ ವೇಳೆ, ಭಾರತೀಯ ಸಮುದಾಯದ ಜನರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು.
ಅಬುಧಾಬಿಯಲ್ಲಿ ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸಂಸ್ಥಾ (BAPS) ಮಂದಿರವನ್ನು ನಿರ್ಮಿಸಲಾಗಿದ್ದು, ಇದು ಯುಎಇ ಮೊದಲ ಹಿಂದು ದೇವಾಲಯ ಎನಿಸಿದೆ. ರಾಜಸ್ಥಾನದ ಮಕ್ರಾನ ಗ್ರಾಮದ ಶಿಲ್ಪಿಗಳು, ಕುಶಲಕರ್ಮಿಗಳು ಯುಎಇ ಹಿಂದು ದೇವಾಲಯದ ವಾಸ್ತುಶಿಲ್ಪಕ್ಕೆ, ಮೂರ್ತಿಗಳ ಕೆತ್ತನೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.
ಕಳೆದ ಐದು ವರ್ಷದಲ್ಲಿ ಇವರು ರಾಮ, ಕೃಷ್ಣನ ಮೂರ್ತಿಗಳು, ದೇವಾಲಯದ ಕಂಬಗಳು, ಶಿಖರಗಳು, ಕಲಾಕೃತಿಗಳನ್ನು ಕೆತ್ತುವ ಮೂಲಕ ದೇವಸ್ಥಾನದ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. 2019ರಲ್ಲಿ ದೇವಾಲಯ ನಿರ್ಮಾಣ ಆರಂಭವಾಗಿದ್ದು, ಇಷ್ಟೂ ವರ್ಷಗಳಲ್ಲಿ ರಾಜಸ್ಥಾನದ ಕಲಾವಿದರು ಅವಿರತವಾಗಿ ಶ್ರಮಿಸಿ, ಶಿಲ್ಪಕಲೆಯ ಮೆರುಗನ್ನು ಹೆಚ್ಚಿಸಿದ್ದಾರೆ.
ರಾಜಸ್ಥಾನದ ಮಾರ್ಬಲ್‌ಗಳು, ಅಮೃತಶಿಲೆ ಹಾಗೂ ಪಿಂಕ್ ಸ್ಯಾಂಡ್‌ಸ್ಟೋನ್‌ಗಳನ್ನು ಬಳಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಮೂರ್ತಿ, ಗೋಪುರ, ಕಲಾಕೃತಿಗಳಿಗೂ ಇದೇ ಶಿಲೆಗಳನ್ನು ಬಳಸಲಾಗಿದೆ. ಪ್ರತಿಯೊಂದು ಶಿಖರದ ಕೆತ್ತನೆಯು ರಾಮಾಯಣ, ಶಿವಪುರಾಣ, ಭಾಗವತಂ ಹಾಗೂ ಮಹಾಭಾರತದಿಂದ ಸ್ಫೂರ್ತಿ ಪಡೆದಿದೆ. ರಾಜಸ್ಥಾನದಿಂದ ಅಮೃತಶಿಲೆಗಳು, ಪಿಂಕ್ ಸ್ಯಾಂಡ್‌ಸ್ಟೋನ್‌ಗಳನ್ನು ಯುಎಇಗೆ ಕಳುಹಿಸಲಾಗಿದೆ. ದೇವಾಲಯದಲ್ಲಿ ಎರಡು ಶಿಖರ, 12 ಗೋಪುರಗಳಿವೆ. ಎಲ್ಲ ಕಲಾಕೃತಿಗಳ ಹಿಂದೆಯೂ ರಾಜಸ್ಥಾನ ಕಲಾವಿದರ ಕೈಚಳಕವಿದೆ.
ಹಿಂದು ದೇವಾಲಯ ನಿರ್ಮಾಣದ ಕುರಿತು ಪ್ರಸ್ತಾಪ ಮಾಡಿದ್ದನ್ನು ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ. “2015ರಲ್ಲಿ ನಾನು ಯುಎಇಗೆ ಭೇಟಿ ನೀಡಿದ್ದೆ. ಆಗ, ಹಿಂದೂ ದೇವಾಲಯ ನಿರ್ಮಾಣ ಪ್ರಸ್ತಾಪವನ್ನು ಯುಇಎ ಅಧ್ಯಕ್ಷರ ಮುಂದಿಟ್ಟಾಗ, ಮರುಕ್ಷಣವೇ ಅವರು ಒಪ್ಪಿಗೆ ಸೂಚಿಸಿದರು. ಪರಿಣಾಮ, ಅಬುಧಾಬಿಯ 27 ಎಕರೆ ಭೂಮಿಯಲ್ಲಿ ಈಗ ದೇವಾಲಯ ನಿರ್ಮಾಣವಾಗಿದೆ. ಅದನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಫೆಬ್ರವರಿ 13) ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: UAE Temple Inauguration: ಅಬುಧಾಬಿಯಲ್ಲಿ ಪ್ರಧಾನಿ ಮೋದಿಯಿಂದ ಹಿಂದೂ ದೇಗುಲ ಉದ್ಘಾಟನೆಯ ಲೈವ್ ವಿಡಿಯೋ ಇಲ್ಲಿ ನೋಡಿ…