ಹೊಸದಿಲ್ಲಿ: ತಾವು ಮೂರನೇ ಬಾರಿಗೆ ಕೇಂದ್ರದಲ್ಲಿ ತಮ್ಮ ಪಕ್ಷ ಆಡಳಿತಕ್ಕೆ ಆರಿಸಿ ಬರುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದಲ್ಲಿ (religious minority) ತಾರತಮ್ಯಕ್ಕೆ ತುತ್ತಾದ ಭಾವನೆ ಇಲ್ಲ ಎಂದೂ ಹೇಳಿದ್ದಾರೆ.
ಬ್ರಿಟನ್ ಮೂಲದ ಫೈನಾನ್ಷಿಯಲ್ ಟೈಮ್ಸ್ (Financial Times) ಮಾಧ್ಯಮಕ್ಕೆ ಪ್ರಧಾನಿ ಮೋದಿ ನೀಡಿರುವ ಸಂದರ್ಶನದಲ್ಲಿ (PM Narendra Modi interview) ಈ ವಿಚಾರಗಳು ಹಾಗೂ ಇನ್ನಿತರ ಸಂಗತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಸರ್ಕಾರ ಟೀಕಾಕಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಸಂವಿಧಾನವನ್ನು (Constitution) ತಿದ್ದುಪಡಿ ಮಾಡುವ ಉದ್ದೇಶ ತಮ್ಮ ಪಕ್ಷಕ್ಕಿಲ್ಲ ಎಂದೂ ತಿಳಿಸಿದ್ದಾರೆ.
ಅವರ ಸಂದರ್ಶನದ ಪ್ರಮುಖ ಆಯ್ದ ಭಾಗಗಳು ಇಲ್ಲಿವೆ.
“ಭಾರತೀಯ ಸಂವಿಧಾನವನ್ನು ತಿದ್ದುಪಡಿ ಮಾಡುವ ಯಾವುದೇ ಉದ್ದೇಶ ನಮಗಿಲ್ಲ. ನಮ್ಮ ಸರಕಾರ ತೆಗೆದುಕೊಂಡಿರುವ ಅತ್ಯಂತ ಕ್ರಾಂತಿಕಾರ ಬದಲಾವಣೆಗಳು ಯಾವುದೇ ಸಂವಿಧಾನ ತಿದ್ದುಪಡಿ ಇಲ್ಲದೇ, ಶ್ರೀಸಾಮಾನ್ಯರ ಒಳಗೊಳ್ಳುವಿಕೆಯಿಂದಲೇ ಆಗಿದೆ ಎಂಬುದನ್ನು ಗಮನಿಸಿ.”
“ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಭಯವಿಲ್ಲ, ತಾರತಮ್ಯ ಎಸಗಿಲ್ಲ. ಭಾರತೀಯ ಪಾರ್ಸಿಗಳು ಸಾಧಿಸಿರುವ ಏಳಿಗೆಯನ್ನು ಗಮನಿಸಿ. ಅವರೊಂದು ಅತ್ಯಂತ ಸಣ್ಣ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ. ಜಗತ್ತಿನ ಬೇರೆ ಎಲ್ಲಾ ಕಡೆಗಳಲ್ಲಿ ತುಳಿತಕ್ಕೆ ತುತ್ತಾದ ಅವರು ಭಾರತಕ್ಕೆ ಬಂದು ನೆಲೆ ಕಂಡುಕೊಂಡಿದ್ದಾರೆ. ಇಂದು ಆರ್ಥಿಕವಾಗಿ ಪ್ರಗತಿ ಸಾಧಿಸಿ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಭಾರತೀಯರು ಯಾವುದೇ ಸಮುದಾಯದ ಬಗ್ಗೆ ತಾರತಮ್ಯ ತೋರುತ್ತಿಲ್ಲ ಎಂಬುದಕ್ಕೆ ಇದೇ ಸಾಕ್ಷಿ.”
“ಭಾರತ ಭಾರೀ ಪ್ರಗತಿಯತ್ತ ಜಿಗಿಯುವ ಹಂತದಲ್ಲಿದೆ. 2024ರ ರಾಷ್ಟ್ರೀಯ ಚುನಾವಣೆಗಳಲ್ಲಿ ನಾವು ಮತ್ತೆ ಆರಿಸಿ ಬರುವುದು ಖಚಿತ. ಪ್ರಗತಿಗಾಗಿ ಯಾರನ್ನು ಆರಿಸಬೇಕು ಎಂಬುದು ಭಾರತೀಯ ಪ್ರಜೆಗಳಿಗೆ ಚೆನ್ನಾಗಿ ತಿಳಿದಿದೆ. ನಮ್ಮ ಸರಕಾರ ಕಳೆದ ಹತ್ತು ವರ್ಷಗಳಲ್ಲಿ ಶ್ರೀಸಾಮಾನ್ಯರ ಬದುಕಿನಲ್ಲಿ ಭಾರಿ ಬದಲಾವಣೆ ತಂದಿದೆ. ಹತ್ತು ವರ್ಷಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಪ್ರಜೆಗಳ ಆಕಾಂಕ್ಷೆಗಳು ಬದಲಾಗಿವೆ.”
“ಬಿಜೆಪಿ ಆಡಳಿತದಡಿಯಲ್ಲಿ ವಿಪಕ್ಷಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂಬ ವಾದದಲ್ಲಿ ಹುರುಳಿಲ್ಲ. ಭಾರತೀಯ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಅವರ ವಾದ ಭಾರತೀಯ ಶ್ರೀಸಾಮಾನ್ಯರ ವಿವೇಕಕ್ಕೆ ಅವಮಾನ ಮಾಡುವಂಥದ್ದು. ಹಾಗೆಯೇ ಇಲ್ಲಿ ವೈವಿಧ್ಯತೆ, ಗಣತಂತ್ರಗಳ ಬಗ್ಗೆ ಆತ ಹೊಂದಿರುವ ಅರಿವನ್ನು ಕೀಳಂದಾಜಿಸುವಂಥದು.”
ಇದನ್ನೂ ಓದಿ: BJP JDS Alliance: ಮೈತ್ರಿ ಸೀಟು ಹಂಚಿಕೆ; ದೇವೇಗೌಡರಿಗೆ ಮೋದಿ ಹೇಳಿದ್ದೇನು?