Site icon Vistara News

PM Narendra Modi: ʼಇಂಡಿಯನ್‌ ಮುಜಾಹಿದೀನ್‌ʼ ʼಪಿಎಫ್‌ಐʼನಲ್ಲೂ ʼಇಂಡಿಯಾʼ ಇದೆ! ಪ್ರತಿಪಕ್ಷಗಳ ಬೆಂಡೆತ್ತಿದ ಪಿಎಂ ಮೋದಿ

PM Narendra Modi

ಹೊಸದಿಲ್ಲಿ: ಉಗ್ರಗಾಮಿ ಸಂಘಟನೆಗಳಾದ ʼಇಂಡಿಯನ್ ಮುಜಾಹಿದ್ದೀನ್ʼ (indian mujahideen) ಮತ್ತು ʼಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾʼಗಳಲ್ಲಿ (popular front of india) ಕೂಡ ʼಇಂಡಿಯಾʼ ಇದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಪ್ರತಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

I.N.D.I.A ಎಂಬ ಹೆಸರು ಇಟ್ಟುಕೊಂಡಿರುವ ಪ್ರತಿಪಕ್ಷಗಳ ಮೈತ್ರಿಕೂಟವನ್ನು ಅವರು ಟೀಕಿಸಿದ್ದು, ಅವರ ಹೇಳಿಕೆಯನ್ನು ಕೇಂದ್ರ ಮಾಜಿ ಸಚಿವ ರವಿಶಂಕರ ಪ್ರಸಾದ್‌ ಅವರು ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಕಟಿಸಿದರು.

2024ರ ರಾಷ್ಟ್ರೀಯ ಚುನಾವಣೆಯ ಕಾರ್ಯತಂತ್ರವನ್ನು ಚರ್ಚಿಸಲು ಕಳೆದ ವಾರ ಬೆಂಗಳೂರಿನಲ್ಲಿ ಬಿಜೆಪಿಯೇತರ 26 ಪಕ್ಷಗಳ ಸಭೆ ನಡೆಸಲಾಗಿತ್ತು. ಇವುಗಳ ಒಕ್ಕೂಟಕ್ಕೆ ʼಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟʼ ಎಂಬುದರ ಸಂಕ್ಷಿಪ್ತ ರೂಪವಾಗಿ ʼಇಂಡಿಯಾʼ ಎಂಬ ಹೆಸರನ್ನು ಇಡಲಾಗಿತ್ತು.

ʼʼಇಂಥ ದಿಕ್ಕೆಟ್ಟ ಪ್ರತಿಪಕ್ಷಗಳನ್ನು ನಾನು ಯಾವತ್ತೂ ನೋಡಿರಲಿಲ್ಲ. ʼಇಂಡಿಯಾʼ ಎಬ ಹೆಸರಿಗಾಗಿ ಅವರು ತಮ್ಮನ್ನೇ ಶ್ಲಾಘಿಸಿಕೊಳ್ಳುತ್ತಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದ್ದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ- ಇವುಗಳಲ್ಲಿ ಕೂಡ ಇಂಡಿಯಾ ಇದೆ. ಬರೀ ಇಂಡಿಯಾ ಎಂಬ ಹೆಸರನ್ನು ಬಳಸುವುದರಲ್ಲಿ ಏನೂ ಅರ್ಥವಿಲ್ಲ” ಎಂದು ಪ್ರಧಾನಿ ಹೇಳಿದ್ದಾರೆ.

ಭಾರತದ ಹೆಸರನ್ನು ಬಳಸಿ ಜನತೆಯನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದ ಮೋದಿ, ಪ್ರತಿಪಕ್ಷಗಳ ಒಕ್ಕೂಟವನ್ನು ʼಸೋತ, ಬಳಲಿದ, ಭರವಸೆಯಿಲ್ಲದ, ಮೋದಿಯನ್ನು ವಿರೋಧಿಸುವ ಏಕೈಕ ಅಜೆಂಡಾ ಹೊಂದಿದ ಒಕ್ಕೂಟʼ ಎಂದು ಬಣ್ಣಿಸಿದರು. ತಾವು ಪ್ರತಿಪಕ್ಷದಲ್ಲಿಯೇ ಇರಲು ಅವರು ನಿರ್ಧರಿಸಿದ್ದಾರೆ. 2024ರ ಚುನಾವಣೆಯಲ್ಲಿ ಬಿಜೆಪಿ ಜನತೆಯ ಬೆಂಬಲದೊಂದಿಗೆ ಗೆಲ್ಲಲಿದೆ ಎಂದರು.

ಪ್ರಧಾನಮಂತ್ರಿ ಸದನದಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಸಮಗ್ರ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಕಲಾಪಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ಮೋದಿ, ಮಣಿಪುರದ ಸಹೋದರಿಯರಿಗೆ ಆದುದ್ದನ್ನು ಕ್ಷಮಿಸಲಾಗದು. ಯಾವ ತಪ್ಪಿತಸ್ಥರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: Opposition Meet: ಯಾವ ಪಕ್ಷ ಯಾವ ಕೂಟದಲ್ಲಿದೆ? ‘ಎನ್‌ಡಿಎ’, ‘ಇಂಡಿಯಾ’ ಪರ ಇರುವ ಪಕ್ಷಗಳೆಷ್ಟು?

Exit mobile version