Site icon Vistara News

ಬಿಜೆಪಿ ಜಯಭೇರಿ ಬೆನ್ನಲ್ಲೇ ನಿಫ್ಟಿ, ಸೆನ್ಸೆಕ್ಸ್‌ ನೆಗೆತ, ಸುಧಾರಿಸಿದ ರೂಪಾಯಿ ಮೌಲ್ಯ!

Narendra Modi And stock market news

ಮುಂಬೈ: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವು ಸಾಧಿಸಿದ (Assembly Election Results 2023) ಬೆನ್ನಲ್ಲೇ ದೇಶದ ಷೇರುಪೇಟೆಯಲ್ಲಿ (Stock Market) ಹೊಸ ಉತ್ಸಾಹ ಮೂಡಿದೆ. ಸೋಮವಾರ ನಿಫ್ಟಿ, ಸೆನ್ಸೆಕ್ಸ್‌ ದಾಖಲೆಯ ಏರಿಕೆ ಕಂಡಿದ್ದು, ಚುನಾವಣೆ ಫಲಿತಾಂಶವೇ ಇದಕ್ಕೆ ಕಾರಣ ಎಂದು ಷೇರುಪೇಟೆ ತಜ್ಞರು ತಿಳಿಸಿದ್ದಾರೆ. ಮತ್ತೊಂದೆಡೆ ಡಾಲರ್‌ ಎದುರು ರೂಪಾಯಿ ಮೌಲ್ಯವೂ ಸುಧಾರಿಸಿಕೊಂಡಿದೆ.

ಷೇರು ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಭಾರಿ ಲವಲವಿಕೆ ಕಂಡುಬಂದಿದೆ. ಬಿಎಸ್‌ಇ ಸೆನ್ಸೆಕ್ಸ್‌ 877.43 ಪಾಯಿಂಟ್‌ಗಳ ಏರಿಕೆಯೊಂದಿಗೆ (ಶೇ.1.3%) 68,358.52 ಅಂಕಗಳೊಂದಿಗೆ ಸಾರ್ವಕಾಲಿಕ ಸಾಧನೆ ಮಾಡಿತು. ಇನ್ನು ನಿಫ್ಟಿಯೂ 284.80 ಅಂಕಗಳ ಏರಿಕೆಯೊಂದಿಗೆ (ಶೇ.1.41) 20,552.70 ಅಂಕಗಳನ್ನು ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಪಾಯಿಂಟ್‌ಗಳ ದಾಖಲೆ ಬರೆಯಿತು.

ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಡಾಲರ್‌ ಎದುರು ರೂಪಾಯಿ ಮೌಲ್ಯವು 6 ಪೈಸೆ ಸುಧಾರಣೆಯಾಗಿದೆ. ಇನ್ನು ಷೇರು ಮಾರುಕಟ್ಟೆಯಲ್ಲ ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ ಹಲವು ಕಂಪನಿಗಳ ಮಾರುಕಟ್ಟೆ ಬಂಡವಾಳವು 4.09 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಬೆಳಗ್ಗೆಯ ಟ್ರೇಡಿಂಗ್‌ನಲ್ಲಿ ಅದಾನಿ ಗ್ರೂಪ್‌ ಕಂಪನಿಗಳು ಹೆಚ್ಚು ಲಾಭ ಗಳಿಸಿವೆ. ಹಾಗೆಯೇ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಎನ್‌ಟಿಪಿಸಿ ಹಾಗೂ ಲಾರ್ಸೆನ್‌ & ಟರ್ಬೊ ಕೂಡ ಹೆಚ್ಚಿನ ಲಾಭ ಗಳಿಸಿದವು.

ಷೇರು ಪೇಟೆಗೂ, ಚುನಾವಣೆಗೂ ಏನು ಸಂಬಂಧ?

ಚುನಾವಣೆ ಫಲಿತಾಂಶಕ್ಕೂ, ಷೇರುಪೇಟೆ ವಹಿವಾಟಿಗೂ ಸಂಬಂಧವಿದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಷೇರುಪೇಟೆಯು ಸ್ಥಿರ ಹಾಗೂ ಸುಧಾರಣೆ ಪರವಾಗಿರುವ ರಾಜಕಾರಣವನ್ನು ಬಯಸುತ್ತದೆ. ಮಾರುಕಟ್ಟೆ ದೃಷ್ಟಿಯಿಂದ ಚುನಾವಣೆ ಫಲಿತಾಂಶವು ನಿರೀಕ್ಷೆಗಿಂತ ಹೆಚ್ಚಾಗಿದೆ. ಬಿಜೆಪಿ ಗೆಲುವು ಸಾಧಿಸಿದ ಕಾರಣ ಷೇರು ಮಾರುಕಟ್ಟೆಯಲ್ಲಿ 500 ಪಾಯಿಂಟ್‌ಗಳ ಏರಿಕೆಯಾಗಿದೆ. ಇದೇ ಬೆಳವಣಿಗೆ ಮುಂದುವರಿಯಲಿದೆ” ಎಂದು ಹೂಡಿಕೆ ತಜ್ಞ ವಿ.ಕೆ. ವಿಜಯ್‌ಕುಮಾರ್‌ ಅವರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: PM Narendra Modi: 3 ರಾಜ್ಯದ ಗೆಲುವು 2024ರ ಹ್ಯಾಟ್ರಿಕ್ ಜಯದ ಮುನ್ಸೂಚನೆ; ಮೋದಿ ಬಣ್ಣನೆ

ಮಧ್ಯಪ್ರದೇಶದಲ್ಲಿ ಒಟ್ಟು 230 ಕ್ಷೇತ್ರಗಳ ಪೈಕಿ ಬಿಜೆಪಿ 163, ಕಾಂಗ್ರೆಸ್‌ 66 ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಜಸ್ಥಾನದ 199 ಕ್ಷೇತ್ರಗಳ ಪೈಕಿ ಬಿಜೆಪಿ 115, ಕಾಂಗ್ರೆಸ್‌ 69 ಹಾಗೂ 18 ಕ್ಷೇತ್ರಗಳು ಇತರೆ ಪಕ್ಷಗಳ ಪಾಲಾಗಿವೆ. ಛತ್ತೀಸ್‌ಗಢದಲ್ಲಿರುವ ಒಟ್ಟು 90 ಕ್ಷೇತ್ರಗಳ ಪೈಕಿ ಬಿಜೆಪಿ 54, ಕಾಂಗ್ರೆಸ್‌ 35 ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಮೂರೂ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version