Site icon Vistara News

Narendra Modi: ಕರ್ನಾಟಕದ 2 ಸೇರಿ 15 ಏರ್‌ಪೋರ್ಟ್‌ ಯೋಜನೆಗಳಿಗೆ ಮೋದಿ ಚಾಲನೆ

Narendra Modi

PM Narendra Modi Modi inaugurates 15 airports including Hubballi And Belagavi Airport Terminal

ಲಖನೌ: ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣ (Hubli Airport) ಹಾಗೂ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ (Belgaum Airport) ಹೊಸ ಟರ್ಮಿನಲ್‌ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಸೇರಿ ದೇಶಾದ್ಯಂತ 15 ಏರ್‌ಪೋರ್ಟ್‌ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಮಾರ್ಚ್‌ 10) ಚಾಲನೆ ನೀಡಿದರು. ಉತ್ತರ ಪ್ರದೇಶದ ಆಜಂಗಢದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ನರೇಂದ್ರ ಮೋದಿ ಅವರು ವರ್ಚ್ಯುವಲ್‌ ವೇದಿಕೆ ಮೂಲಕ ಏರ್‌ಪೋರ್ಟ್‌ ಯೋಜನೆಗಳಿಗೆ (Airport Projects) ಚಾಲನೆ ನೀಡಿದರು.

ಸುಮಾರು 9,800 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಪುಣೆ, ಕೊಲ್ಹಾಪುರ, ಗ್ವಾಲಿಯರ್‌, ಜಬಲ್ಪುರ, ದೆಹಲಿ, ಲಖನೌ, ಅಲಿಗಢ, ಆಜಂಗಢ, ಚಿತ್ರಕೂಟ, ಮೊರಾದಾಬಾದ್‌, ಶ್ರವಸ್ತಿ ಹಾಗೂ ಆದಂಪುರ ವಿಮಾನ ನಿಲ್ದಾಣಗಳಲ್ಲಿ ನಿರ್ಮಿಸಲಾಗಿರುವ ಪ್ಯಾಸೆಂಜರ್‌ ಟರ್ಮಿನಲ್‌ಗಳನ್ನು ಮೋದಿ ಲೋಕಾರ್ಪಣೆ ಮಾಡಿದರು. ಹಾಗೆಯೇ, ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ ಹಾಗೂ ಆಂಧ್ರಪ್ರದೇಶದ ಕಡಪ ವಿಮಾನ ನಿಲ್ದಾಣಗಳಲ್ಲಿ ಹೊಸ ಟರ್ಮಿನಲ್‌ಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಬೆಂಗಳೂರಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುಮಾರು 352 ಕೋಟಿ ರೂ. ವೆಚ್ಚದಲ್ಲಿ ಹೊಸ ಟರ್ಮಿನಲ್‌ ನಿರ್ಮಿಸಲಾಗುತ್ತದೆ. ಇನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲೂ 350 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್‌ ನಿರ್ಮಿಸಲಾಗುತ್ತದೆ. ಬೆಳಗಾವಿ ವಿಮಾನ ನಿಲ್ದಾಣದ ಟರ್ಮಿನಲ್‌ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಉಪಸ್ಥಿತರಿದ್ದರು.

ಇದನ್ನೂ ಓದಿ: Narendra Modi: ತ್ರಿಶೂಲ ಹಿಡಿದು ಶಿವನ ಅವತಾರ ತಾಳಿದ ಮೋದಿ; ವಿಡಿಯೊ ವೈರಲ್

ವಿಕಸಿತ ಭಾರತಕ್ಕೆ ಮುನ್ನುಡಿ ಎಂದ ಮೋದಿ

ವಿಮಾನ ನಿಲ್ದಾಣದ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ನರೇಂದ್ರ ಮೋದಿ, “ದೇಶದ ವಿಮಾನ ನಿಲ್ದಾಣ ಯೋಜನೆಗಳಿಗೆ ಚಾಲನೆ ನೀಡಿರುವುದು 2047ರ ವಿಕಸಿತ ಭಾರತ ನಿರ್ಮಾಣದ ಸಂಕಲ್ಪಕ್ಕೆ ಮುನ್ನುಡಿಯಾಗಿದೆ” ಎಂದು ಹೇಳಿದರು. “ದೇಶದಲ್ಲಿ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ತತ್ವದಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಸಣ್ಣ ನಗರಗಳಲ್ಲೂ ಇಂದು ವಿಮಾನ ನಿಲ್ದಾಣಗಳು ರಾರಾಜಿಸುತ್ತಿವೆ. ರೈಲ್ವೆ ಸಂಪರ್ಕವೂ ಉತ್ತಮವಾಗಿದೆ. ದಾಖಲೆ ಪ್ರಮಾಣದಲ್ಲಿ ರಸ್ತೆ ನಿರ್ಮಿಸಲಾಗಿದೆ. ಇದೆಲ್ಲ ಮೋದಿಯ ಗ್ಯಾರಂಟಿಯಾಗಿದೆ” ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version