Site icon Vistara News

Tshering Tobgay: ಮೋದಿ ನನ್ನ ಗುರು, ದೊಡ್ಡಣ್ಣ;‌ ಭೂತಾನ್‌ ಪ್ರಧಾನಿ ತ್ಶೆರಿಂಗ್‌ ತೋಬ್ಗೆ ಬಹುಪರಾಕ್!

Tshering Tobgay

PM Narendra Modi My Guru, Big Brother: Says Bhutan PM Tshering Tobgay

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಭಾನುವಾರ (ಜೂನ್‌ 9) ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶ-ವಿದೇಶಗಳ ಸಾವಿರಾರು ಗಣ್ಯರು ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಇದರ ಬೆನ್ನಲ್ಲೇ, ಭೂತಾನ್‌ ಪ್ರಧಾನಿ ತ್ಶೆರಿಂಗ್‌ ತೋಬ್ಗೆ (Tshering Tobgay) ಅವರು ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. “ನರೇಂದ್ರ ಮೋದಿ ಅವರು ನನ್ನ ಗುರು, ಅವರು ನನ್ನ ದೊಡ್ಡಣ್ಣ ಇದ್ದಂತೆ” ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

“ನರೇಂದ್ರ ಮೋದಿ ಅವರ ಮಾರ್ಗದರ್ಶನವು ನನಗೆ ಪ್ರಮುಖವಾಗಿದೆ. ಅವರು ನನಗೆ ಗುರು, ಸಹೋದರ ಇದ್ದಂತೆ. ಅವರ ಜತೆ ಉತ್ತಮ ಬಾಂಧವ್ಯ ಹೊಂದಿರುವುದು ನನಗೆ ಖುಷಿಯಾದ ವಿಚಾರ. ಅವರು ದೂರದೃಷ್ಟಿ ಹೊಂದಿರುವ ನಾಯಕರಾಗಿದ್ದು, ಆ ಯೋಜನೆಯನ್ನು ಅವರು ಸಾಕಾರಗೊಳಿಸುತ್ತಾರೆ. ಇದೆಲ್ಲದರ ಹೊರತಾಗಿ ಅವರು ನನಗೆ ದೊಡ್ಡಣ್ಣ ಇದ್ದಂತೆ. ನಾನು ಅವರನ್ನು ಬಡೆ ಭಾಯ್‌ ಎಂದೇ ಕರೆಯುತ್ತೇನೆ” ಎಂಬುದಾಗಿ ತ್ಶೆರಿಂಗ್‌ ತೋಬ್ಗೆ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಕಳೆದ ಮಾರ್ಚ್‌ನಲ್ಲಿ ಭೂತಾನ್‌ಗೆ ಭೇಟಿ ನೀಡಿ, ಎರಡು ದಿನ ತಂಗಿದ್ದರು. “ನರೇಂದ್ರ ಮೋದಿ ಅವರು ಭೂತಾನ್‌ಗೆ ಆಗಮಿಸುವ ಗ್ಯಾರಂಟಿ ನೀಡಿದ್ದರು. ಈಗ ಆ ಗ್ಯಾರಂಟಿ ಸಾಕಾರಗೊಂಡಿದೆ” ಎಂಬುದಾಗಿ ಇದೇ ವೇಳೆ ತ್ಶೆರಿಂಗ್‌ ತೋಬ್ಗೆ ಹೇಳಿದ್ದರು. ಅಷ್ಟೇ ಅಲ್ಲ, ಮೋದಿ ಅವರು ಭೂತಾನ್‌ಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಡ್ರಕ್‌ ಗ್ಯಾಲ್ಪೋ” ನೀಡಿ ಗೌರವಿಸಿದ್ದರು. ಇದರೊಂದಿಗೆ ಭೂತಾನ್‌ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ವಿಶ್ವದ ನಾಲ್ಕನೇ ವಿದೇಶಿ ನಾಯಕ ಎಂಬ ಖ್ಯಾತಿಗೆ ಮೋದಿ ಭಾಜನರಾಗಿದ್ದರು.

ಭಾರತದ ಸಾವಿರಾರು ಗಣ್ಯರ ಜತೆಗೆ ನೆರೆ ರಾಷ್ಟ್ರಗಳ ನಾಯಕರು ಕೂಡ ಭಾಗವಹಿಸಿದ್ದರು. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿದ್ದರು.

ಇದನ್ನೂ ಓದಿ: Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

Exit mobile version