Site icon Vistara News

Narendra Modi: ಭರ್ಜರಿ ರೋಡ್‌ ಶೋ, ಪ್ರಾರ್ಥನೆ, ಭಜನೆ; ನಾಶಿಕ್‌ನಲ್ಲಿ ಮೋದಿ ಹವಾ

Narendra Modi

PM Narendra Modi offers prayers at Shree Kalaram Mandir in Nashik, Maharashtra

ಮುಂಬೈ: ಸಮುದ್ರ ಸೇತುವೆ ಅಟಲ್‌ ಸೇತುಗೆ (Atal Setu Bridge) ಚಾಲನೆ, ರಾಷ್ಟ್ರೀಯ ಯೂತ್‌ ಫೆಸ್ಟಿವಲ್‌ (National Youth Festival) ಉದ್ಘಾಟನೆ ಸೇರಿ ಮಹಾರಾಷ್ಟ್ರಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾಶಿಕ್‌ನಲ್ಲಿ ಭರ್ಜರಿ ರೋಡ್‌ ಶೋ (Road Show) ಮೂಲಕವೂ ಗಮನ ಸೆಳೆದರು. ಹಾಗೆಯೇ, ನಾಶಿಕ್‌ನಲ್ಲಿರುವ ಶ್ರೀ ಕಾಲಾರಾಮ್‌ ಮಂದಿರಕ್ಕೆ (Shree Kalaram Mandir) ತೆರಳಿದ ಅವರು ವಿಶೇಷ ಪೂಜೆ, ಪ್ರಾರ್ಥನೆ ಜತೆಗೆ ಭಜನೆಯನ್ನೂ ಮಾಡಿದರು.

ನಾಶಿಕ್‌ನಲ್ಲಿ ನರೇಂದ್ರ ಮೋದಿ ಅವರು ಕೈಗೊಂಡ ರೋಡ್‌ ಶೋಗೆ ಭರ್ಜರಿ ಸ್ಪಂದನೆ ವ್ಯಕ್ತವಾಯಿತು. ರೋಡ್‌ ಶೋ ಸಾಗುವ ಮಾರ್ಗದುದ್ದಕ್ಕೂ ಜನ ಹೂಮಳೆ ಸುರಿಸಿ ಅಭಿಮಾನ ವ್ಯಕ್ತಪಡಿಸಿದರು. ಭಾರತ್‌ ಮಾತಾ ಕೀ ಜೈ, ಜೈ ಶ್ರೀರಾಮ್‌ ಸೇರಿ ಹಲವು ಘೋಷಣೆಗಳು ಇದೇ ವೇಳೆ ಮೊಳಗಿದವು. ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಕೂಡ ರೋಡ್‌ ಶೋನಲ್ಲಿ ಪಾಲ್ಗೊಂಡರು.

ರಾಷ್ಟ್ರೀಯ ಯೂತ್‌ ಫೆಸ್ಟಿವಲ್‌ ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, “ನರೇಂದ್ರ ಮೋದಿ ಅವರು ದೂರದೃಷ್ಟಿಯ ನಾಯಕರಾಗಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ಏಳಿಗೆಯತ್ತ ಸಾಗುತ್ತಿದೆ. ನರೇಂದ್ರ ಮೋದಿ ಪರಿಶ್ರಮದ ಫಲವಾಗಿಯೇ ಇಂದು ಅಯೋಧ್ಯೆಯಲ್ಲಿ ರಾಮಮಂದಿರದ ಕನಸು ನನಸಾಗಿದೆ. ದೇಶದ ಯುವಕರು ದೇಶದ ಭವಿಷ್ಯವಾಗಿದ್ದು, ಪ್ರಧಾನಿಯವರನ್ನು ಸ್ಫೂರ್ತಿಯನ್ನಾಗಿಸಿಕೊಳ್ಳಬೇಕು” ಎಂದು ಹೇಳಿದರು.

ಇದನ್ನೂ ಓದಿ: Atal Setu: ʼಮೂರನೇ ಮುಂಬೈʼ ಸೃಷ್ಟಿಸುವ ದೇಶದ ಅತೀ ದೊಡ್ಡ ಸಮುದ್ರ ಸೇತುವೆಗೆ ಮೋದಿ ಇಂದು ಚಾಲನೆ

ಮಹಾರಾಷ್ಟ್ರ ಭೇಟಿ ವೇಳೆ ನರೇಂದ್ರ ಮೋದಿ ಅವರು ದೇಶದ ಅತಿ ಉದ್ದದ ಸಮುದ್ರ ಸೇತುವೆ ಅಟಲ್‌ ಸೇತು (Atal Setu) ಎಂದು ಕರೆಯ್ಪಡುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ಗೆ ಚಾಲನೆ ನೀಡಲಿದ್ದಾರೆ. ಈ ಅಟಲ್‌ ಸೇತು ದೇಶದ ಅತೀ ದೊಡ್ಡ ಮತ್ತು ಜಗತ್ತಿನ 12ನೇ ಅತೀ ದೊಡ್ಡ ಸಮುದ್ರ ಸೇತುವೆ ಎನಿಸಿಕೊಂಡಿದೆ. 21.8 ಕಿ.ಮೀ ಉದ್ದದ ಈ ಸೇತುವೆಯು 16.5 ಕಿ.ಮೀ ಸಮುದ್ರದಲ್ಲಿ ಮತ್ತು 5.5 ಕಿ.ಮೀ ಭೂ ಪ್ರದೇಶದಲ್ಲಿ ಚಾಚಿಕೊಂಡಿದೆ. ಸಮುದ್ರ ಮಾರ್ಗವು ಎರಡೂ ಬದಿಗಳಲ್ಲಿ ಮೂರು ಮತ್ತು 2 ತುರ್ತು ಪಥಗಳನ್ನು ಒಳಗೊಂಡಿದೆ. ಈ ಸೇತುವೆಯು ನವೀ ಮುಂಬೈಯ ಉಲ್ವೆ ಮತ್ತು ದಕ್ಷಿಣ ಮುಂಬೈ ನಡುವಿನ ಎರಡು ಗಂಟೆಗಳ ಪ್ರಯಾಣದ ಸಮಯವನ್ನು ಕೇವಲ 15-20 ನಿಮಿಷಗಳಿಗೆ ಇಳಿಸಲಿದೆ. ಮೊದಲ ವರ್ಷ ಏಕಮುಖ ಟೋಲ್ ದರ 250 ರೂ. ಮತ್ತು ರೌಂಡ್-ಟ್ರಿಪ್ ಟೋಲ್ ದರ 375 ರೂ. ನಿಗದಿಪಡಿಸಲಾಗಿದೆ. ಕಾರ್ಯಾಚರಣೆ ಪ್ರಾರಂಭವಾದ ಒಂದು ವರ್ಷದ ನಂತರ ದರಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version