Site icon Vistara News

PM Narendra Modi: ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಲು ಸಿದ್ಧವಾದ ಪ್ರತಿಪಕ್ಷಗಳು; ಯಾಕೆ ಈ ನಡೆ?

Mamata Banerjee Sonia Gandhi And Mallikarjun Kharge

ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ಮತ (no confidence motion) ಮಂಡಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಮೇಲೆ ಒತ್ತಡ ಹೇರಲು ಪ್ರತಿಪಕ್ಷಗಳು ಮುಂದಾಗಿವೆ.

ಮಂಗಳವಾರ ಲೋಕಸಭೆ ಅಧಿವೇಶನಕ್ಕೆ (loksabha session) ಮುನ್ನ, ಸರ್ಕಾರವನ್ನು ಎದುರಿಸುವ ಕಾರ್ಯತಂತ್ರದ ಕುರಿತು ಸಮಾಲೋಚನೆ ನಡೆಸಿದ ವಿಪಕ್ಷಗಳು ಈ ನಿರ್ಣಯಕ್ಕೆ ಬಂದಿವೆ. ರಾಜ್ಯಸಭೆಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿವೆ. ಮಣಿಪುರದಲ್ಲಿ (Manipur violence) ಕಾನೂನು ಸುವ್ಯವಸ್ಥೆ ವೈಫಲ್ಯ, ಮಹಿಳಾ ದೌರ್ಜನ್ಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವುದು ಇವುಗಳ ಕಾರ್ಯತಂತ್ರವಾಗಿದೆ.

ಮಣಿಪುರ ಹಿಂಸಾಚಾರ ಹಾಗೂ ಮಹಿಳೆಯರ ಬೆತ್ತಲೆ ಮೆರವಣಿಗೆ ಬಗ್ಗೆ ಪ್ರಧಾನ ಮಂತ್ರಿ ಲೋಕಸಭೆಯಲ್ಲಿ ಸಮಗ್ರ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ಕಲಾಪದಲ್ಲಿ ಗದ್ದಲ ಎಬ್ಬಿಸಿದ್ದವು. ಇದರಿಂದಾಗಿ ಕಲಾಪ ನಡೆಯದೆ ಮುಂದೂಡಲಾಗಿತ್ತು. ಮಂಗಳವಾರ ಮುಂಜಾನೆ ಎನ್‌ಡಿಎ ಹಾಗೂ ಯುಪಿಎ ಉಭಯ ಒಕ್ಕೂಟಗಳೂ ತಮ್ಮತಮ್ಮ ಸಭೆ ನಡೆಸಿದ್ದು, ಸದನದಲ್ಲಿ ಉಂಟಾಗಿರುವ ಸನ್ನಿವೇಶವನ್ನು ಎದುರಿಸುವ ಬಗ್ಗೆ ಕಾರ್ಯತಂತ್ರ ಯೋಜಿಸುತ್ತಿವೆ. ಅವಿಶ್ವಾಸ ಮಂಡನೆಯ ಮೂಲಕ ಪ್ರಧಾನಿ ಸದನದಲ್ಲಿ ಮಾತನಾಡಲೇ ಬೇಕಾದ ಸನ್ನಿವೇಶ ಸೃಷ್ಟಿಸುವುದು ಯುಪಿಎ ಉದ್ದೇಶವಾಗಿದೆ.

ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಕಚೇರಿಯಲ್ಲಿ ನಡೆದ ಪ್ರತಿಪಕ್ಷ ಮುಖಂಡರ ಸಭೆಯಲ್ಲಿ, ಅವಿಶ್ವಾಸ ಮಂಡನೆಯ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಬಿಜೆಪಿಗೆ ಆತಂಕವೇನೂ ಇಲ್ಲ. ಯಾಕೆಂದರೆ ಲೋಕಸಭೆಯಲ್ಲಿ ಬಿಜೆಪಿಗೆ ಸಾಕಷ್ಟು ಬಹುಮತವಿದೆ. ಆದರೆ ವಿಷಯದ ಮೇಲೆ ಮಾತನಾಡಲೇಬೇಕಾದ ಸನ್ನಿವೇಶ ಪ್ರಧಾನಿ ಮೋದಿಯವರಿಗೆ ನಿರ್ಮಾಣವಾಗಲಿದೆ.

ಮಣಿಪುರದ ಸನ್ನಿವೇಶದ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಸಿದ್ಧವಾಗಿದೆ. ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಈ ಬಗ್ಗೆ ಮಾತನಾಡಲಿದ್ದಾರೆ ಎಂದೂ ಅದು ಹೇಳಿದೆ. ಆದರೆ ಮೋದಿಯವರೇ ಈ ಬಗ್ಗೆ ಮಾತನಾಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಪ್ರತಿಪಕ್ಷಗಳನ್ನು ಇಕ್ಕಟ್ಟಿಗೆ ಸಿಕ್ಕಿಸಲು, ಅವುಗಳ ಆಡಳಿತವಿರುವ ರಾಜ್ಯಗಳಲ್ಲಿ ನಡೆದ ದೌರ್ಜನ್ಯಗಳನ್ನು ಮುಂದಿಡಲೂ ಬಿಜೆಪಿ ಸಿದ್ಧತೆ ನಡೆಸಿಕೊಂಡಿದೆ.

ಪ್ರತಿಪಕ್ಷಗಳು ಕಳೆದ ಕೆಲವು ದಿನಗಳಲ್ಲಿ ಮಂಡಿಸಿರುವ ಸದನ ಮುಂದೂಡಿಕೆ ಬೇಡಿಕೆ, ಪ್ರಧಾನ ಮಂತ್ರಿಗಳ ಹೇಳಿಕೆ ಒತ್ತಾಯಗಳನ್ನು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ತಿರಸ್ಕರಿಸಿದ್ದಾರೆ. ಪ್ರಧಾನಿ ಹೇಳಿಕೆ ಒತ್ತಾಯಿಸಿ ಸದನ ಕಲಾಪದಲ್ಲಿ ಗದ್ದಲ ಎಬ್ಬಿಸಿ ಕಲಾಪ ಮುಂದೂಡಲ್ಪಡುವಂತೆ ಪ್ರತಿಪಕ್ಷಗಳು ಮಾಡಿವೆ. ಆದರೆ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂದು ಪ್ರತಿಪಕ್ಷಗಳಲ್ಲೇ ಕೆಲವು ಮುಖಂಡರು ಬಯಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: PM Narendra Modi: ʼಇಂಡಿಯನ್‌ ಮುಜಾಹಿದೀನ್‌ʼ ʼಪಿಎಫ್‌ಐʼನಲ್ಲೂ ʼಇಂಡಿಯಾʼ ಇದೆ! ಪ್ರತಿಪಕ್ಷಗಳ ಬೆಂಡೆತ್ತಿದ ಪಿಎಂ ಮೋದಿ

Exit mobile version