Site icon Vistara News

PM Narendra Modi: ಎಕ್ಸಿಟ್‌ ಪೋಲ್‌ ರಿಸಲ್ಟ್‌ ಬೆನ್ನಲ್ಲೇ ಪ್ರಧಾನಿ ಮೋದಿ ಬ್ಯಾಕ್‌ ಟು ಬ್ಯಾಕ್‌ ಮೀಟಿಂಗ್‌

Narendra Modi Election Live

Narendra Modi Speech After Lok Sabha Election Result 2024

ನವದೆಹಲಿ: ಲೋಕಸಭಾ ಚುನಾವಣೆಯ(Lok Sabha Election 2024) ಏಳನೇ ಹಂತದ ಮತದಾನ ಪೂರ್ಣಗೊಂಡು, ಬಳಿಕ ಎಕ್ಸಿಟ್‌ ಪೋಲ್‌ ಫಲಿತಾಂಶ(Exit Poll 2024)ವೂ ಹೊರಬಿದ್ದಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವ ಸರ್ಕಾರ ಮೂರನೇ ಬಾರಿ ಗದ್ದುಗೆ ಏರುವ ಬಗ್ಗೆ ಭವಿಷ್ಯ ನುಡಿದಿವೆ. ಇದರ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಇಂದು 7 ಸಭೆಗಳನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಕೈಗೆತ್ತಿಕೊಳ್ಳಬಹುದಾದ ಯೋಜನೆ ಹಾಗೂ ದೇಶಾದ್ಯಂತ ತಲೆದೋರಿರುವ ಬಿಸಿಗಾಳಿ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.

ಅಧಿಕೃತ ಮೂಲಗಳ ಪ್ರಕಾರ ಪ್ರಧಾನಿ ಮೋದಿಯವರು ಮೊದಲಿಗೆ ಈಶಾನ್ಯ ರಾಜ್ಯಗಳಲ್ಲಿ ಚಂಡ ಮಾರುತದ ನಂತರ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದಾದ ಬಳಿಕ ಅವರು ಬಿಸಿಗಾಳಿ ಸಮಸ್ಯೆ ಬಗ್ಗೆ ಸಭೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ ಪರಿಸರ ದಿನಾಚರಣೆಗೆ ತಯಾರಿ ಬಗ್ಗೆಯೂ ಸಭೆ ನಡೆಸಲಾಗುತ್ತದೆ ಎಂದು ಹೇಳಿದೆ.

ಇನ್ನು ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರ ಬರುತ್ತಿದ್ದಂತೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, ಭಾರತ ಮತ ಹಾಕಿದೆ! ತಮ್ಮ ಮತ ಚಲಾಯಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಅವರ ಸಕ್ರಿಯ ಪಾಲ್ಗೊಳ್ಳುವಿಕೆ ನಮ್ಮ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ಅವರ ಬದ್ಧತೆ ಮತ್ತು ಸಮರ್ಪಣೆ ನಮ್ಮ ರಾಷ್ಟ್ರದಲ್ಲಿ ಪ್ರಜಾಸತ್ತಾತ್ಮಕ ಚೈತನ್ಯವನ್ನು ವೃದ್ಧಿಸುತ್ತದೆ. ನಾನು ಭಾರತದ ನಾರಿ ಶಕ್ತಿ ಮತ್ತು ಯುವಶಕ್ತಿಯನ್ನು ವಿಶೇಷವಾಗಿ ಪ್ರಶಂಸಿಸಲು ಬಯಸುತ್ತೇನೆ. ಚುನಾವಣೆಯಲ್ಲಿ ಅವರ ಪ್ರಬಲ ಉಪಸ್ಥಿತಿಯು ಬಹಳ ಉತ್ತೇಜಕ ಸಂಕೇತವಾಗಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಇನ್ನು ಮೂರು ಹಂತಗಳ ಮತದಾನ ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ನೂರು ದಿನಗಳ ಯೋಜನೆ ನೀಲನಕ್ಷೆಯನ್ನು ಬಹಿರಂಗಪಡಿಸಿದ್ದರು. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮೊದಲ 100 ದಿನಗಳ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದು, ಈ ಬಾರಿ ಯುವಕರನ್ನೇ ಗುರಿಯನ್ನಾಗಿಸಿ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಕಳೆದೆರಡು ಬಾರಿಯಂತೆ ಈ ಬಾರಿ ಮೊದಲ 100 ದಿನಗಳ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಯುವಕರನ್ನು ಗುರಿಯಾಗಿಸಿಯೇ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಇದನ್ನು ಹೆಚ್ಚುವರಿ 25 ದಿನಗಳವರೆಗೆ ವಿಸ್ತರಿಸಲಾಗುತ್ತದೆ. ಈ 125 ದಿನಗಳವರೆಗೆ ಮೊದಲ ಬಾರಿಗೆ ಮತದಾನ ಮಾಡಿದವರು, ಯುವಜನತೆಯನ್ನು ಗುರಿಯಾಗಿಸಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕನಸಿನ ಯೋಜನೆಯಾಗಿರುವ ವಿಕ್ಷಿತ್‌ ಭಾರತ್‌ಗೆ ಯುವಕರು ತಮ್ಮ ಹೊಸ ಐಡಿಯಾಗಳ ಮೂಲಕ ಕೊಡುಗೆ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದರು.

ಈಗಾಗಲೇ ನಾನು 100ದಿನಗಳ ಯೋಜನೆ ರೂಪಿಸಿ ಆಗಿದೆ. ಇದೀಗ ನಾನು ಯುವಕರಿಗಾಗಿ ಹೆಚ್ಚುವರಿಯಾಗಿ 25ಗಳವರೆಗೆ ಈ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಿದ್ದೇನೆ. ಒಟ್ಟು 125 ದಿನಗಳಲ್ಲಿ 25 ದಿನಗಳನ್ನು ಯುವಕರಿಗಾಗಿ ಮೀಸಲಿಟ್ಟಿದ್ದೇನೆ. ಈ ಯೋಜನೆಯಲ್ಲಿ ಯುವಕರು ಸಕ್ರಿಯವಾಗಿ ಭಾಗಿಯಾಗಿ ತಮ್ಮ ಅಭಿಪ್ರಾಯ, ಚಿಂತನೆಯನ್ನು ಹಂಚಿಕೊಳ್ಳಬಹುದಾಗಿದೆ. ಈ ಬಗ್ಗೆ 20 ಲಕ್ಷಕ್ಕೂ ಅಧಿಕ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:Hassan MP Prajwal Revanna case: ಮೊಂಡಾಟ ಬಿಡದ ಪ್ರಜ್ವಲ್‌; ಇಂದೇ ಸ್ಥಳ ಮಹಜರಿಗೆ SIT ಪ್ಲ್ಯಾನ್‌

Exit mobile version