Site icon Vistara News

PM Narendra Modi: ರಿಕಿ ಕೇಜ್‌ ರಾಷ್ಟ್ರಗೀತೆ ವಾದ್ಯಮೇಳಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

rickey kaje

ಹೊಸದಿಲ್ಲಿ: ಭಾರತೀಯ ರಾಷ್ಟ್ರಗೀತೆಯನ್ನು (National Anthem) 100 ಮಂದಿ ಬ್ರಿಟಿಷ್‌ ಕಲಾವಿದರ ವಾದ್ಯಮೇಳದ ಮೂಲಕ ನುಡಿಸಿರುವ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ (Grammy award) ರಿಕಿ ಕೇಜ್ (Ricky Kej) ಅವರ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಶ್ಲಾಘಿಸಿದ್ದಾರೆ.

ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರಾಗಿರುವ ಸಂಗೀತಗಾರ ರಿಕಿ ಕೇಜ್ ಅವರು 100 ಸದಸ್ಯರ ಬ್ರಿಟಿಷ್ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಸಹಯೋಗದಲ್ಲಿ ಭಾರತೀಯ ರಾಷ್ಟ್ರಗೀತೆಯ ವಾದ್ಯಮೇಳ ನಿರೂಪಣೆಯನ್ನು ಮಾಡಿದ್ದರು. ಅದನ್ನು ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯ (independence day 2023) ಮುನ್ನಾದಿನದಂದು ಹಂಚಿಕೊಂಡಿದ್ದರು. 60 ಸೆಕೆಂಡುಗಳ ಈ ವೀಡಿಯೊವನ್ನು ವಿಶ್ವದಾದ್ಯಂತದ ಪ್ರತಿಯೊಬ್ಬ ಭಾರತೀಯನಿಗೆ ಉಡುಗೊರೆಯಾಗಿ ಬಿಡುಗಡೆ ಮಾಡಿದ್ದರು.

ಲಂಡನ್‌ನ ಅಬ್ಬೆ ರೋಡ್ ಸ್ಟುಡಿಯೋದಲ್ಲಿ ವಿಶ್ವದ ಅತಿದೊಡ್ಡ ಸಿಂಫನಿ ಆರ್ಕೆಸ್ಟ್ರಾ ಭಾರತೀಯ ರಾಷ್ಟ್ರಗೀತೆಯ ಈ ನಿರೂಪಣೆಯನ್ನು ರೆಕಾರ್ಡ್‌ ಮಾಡಿದೆ. ಟ್ವಿಟರ್‌ನಲ್ಲಿ ಇದನ್ನು ಕೇಜ್‌ ಹಂಚಿಕೊಂಡಿದ್ದು, ʼʼಕೆಲವು ದಿನಗಳ ಹಿಂದೆ ನಾನು ಲಂಡನ್‌ನ ಪೌರಾಣಿಕ ಅಬ್ಬೆ ರೋಡ್ ಸ್ಟುಡಿಯೋದಲ್ಲಿ ಭಾರತದ ರಾಷ್ಟ್ರಗೀತೆಯನ್ನು 100 ಪೀಸ್ ಬ್ರಿಟಿಷ್ ಆರ್ಕೆಸ್ಟ್ರಾ, ದಿ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಮೂಲಕ ನುಡಿಸಿದೆ. ಇದು ಭಾರತದ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಿದ ಅತಿದೊಡ್ಡ ಆರ್ಕೆಸ್ಟ್ರಾ. ಕೊನೆಯ “ಜಯ ಹೇ” ನನಗೆ ರೋಮಾಂಚನ ನೀಡಿತು. ಭಾರತೀಯ ಸಂಯೋಜಕನಾಗಿ ನಾನು ಅದ್ಭುತವನ್ನು ಅನುಭವಿಸಿದೆ. ಈ ಸ್ವಾತಂತ್ರ್ಯ ದಿನದಂದು ನಾನು ಈ ಐತಿಹಾಸಿಕ ರೆಕಾರ್ಡಿಂಗ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.” ಎಂದು ಬರೆದಿದ್ದರು.

ಇದನ್ನು ವೀಕ್ಷಿಸಿದ ಪ್ರಧಾನಿ ಮೋದಿ, ʼವಂಡರ್‌ಫುಲ್‌, ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿʼʼ ಎಂದು ಟ್ವೀಟ್‌ ಮಾಡಿದ್ದಾರೆ.

“ನಾವು ಹೊಸ ಭಾರತ ಎಂಬ ಬಗ್ಗೆ ನನಗೆ ದೊಡ್ಡ ಹೆಮ್ಮೆ ಇದೆ. ನಾವು ಹವಾಮಾನ ಬದಲಾವಣೆ ಮತ್ತು ಜಾಗತಿಕ ಆರ್ಥಿಕತೆಯಂತಹ ಅಂತಾರಾಷ್ಟ್ರೀಯ ನಿರ್ಧಾರಗಳಲ್ಲಿ ಭಾಗವಹಿಸುತ್ತಿದ್ದೇವೆ. ಇತರ ದೇಶಗಳು ನಮ್ಮಿಂದ ಮಾರ್ಗದರ್ಶನ ಪಡೆಯುತ್ತಿವೆ. ರಾಷ್ಟ್ರಗೀತೆಯು ಈ ಹೊಸ ಸಿಂಫನಿಯು ಹೊಸ ಭಾರತವನ್ನು ಪ್ರತಿನಿಧಿಸುತ್ತದೆ” ಎಂದು ರಿಕಿ ಹೇಳಿದ್ದರು.

ಕೇಜ್ ಅವರ ಪ್ರದರ್ಶನ ಇದೇ ಮೊದಲಲ್ಲ. 2022ರಲ್ಲಿ ಅವರು ಭಾರತದ 12 ನಿರಾಶ್ರಿತ ಗಾಯಕರೊಂದಿಗೆ ರಾಷ್ಟ್ರಗೀತೆಯನ್ನು ಪ್ರದರ್ಶಿಸಿದ್ದರು. ಈ ಗಾಯಕರು ಮ್ಯಾನ್ಮಾರ್, ಅಫ್ಘಾನಿಸ್ತಾನ ಮತ್ತು ಕ್ಯಾಮರೂನ್ ಮತ್ತಿತರ ಸ್ಥಳಗಳಿಂದ ಬಂದವರಾಗಿದ್ದರು.

ಇದನ್ನೂ ಓದಿ: Ricky Kej: ಯುಎನ್‌ಸಿಸಿಡಿಗೆ 3 ಬಾರಿ ಗ್ರ್ಯಾಮಿ ಅವಾರ್ಡ್ ವಿನ್ನರ್, ಬೆಂಗಳೂರಿಗ ರಿಕಿ ಕೇಜ್ ಸದ್ಭಾವನಾ ರಾಯಭಾರಿ!

Exit mobile version