ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜರ್ಮನಿಗೆ ತೆರಳಿದ್ದು, ಇಂದು 48ನೇ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಮೋದಿ, ‘ಜೂ.26ರಂದು ಜರ್ಮನಿಯ ಸ್ಕ್ಲೋಸ್ ಎಲ್ಮೌನಲ್ಲಿ ನಡೆಯಲಿರುವ G7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದೇನೆ. ವಿಶ್ವದ ಹಲವು ನಾಯಕರೊಂದಿಗೆ ವಿವಿಧ ಸಭೆ ನಡೆಸಲಿದ್ದೇನೆ ಮತ್ತು ಅದಾದ ಬಳಿಕ ಮುನಿಚ್‌ನಲ್ಲಿ ಭಾರತೀಯ ಮೂಲದವರೊಂದಿಗೆ ಸಂವಾದ ನಡೆಸುತ್ತೇನೆ ʼ ಎಂದು ತಿಳಿಸಿದ್ದರು. ಹಾಗೇ, ಅಲ್ಲಿಂದ ಜೂ.೨೮ಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಹೋಗುವುದಾಗಿಯೂ ಮಾಹಿತಿ ನೀಡಿದ್ದಾರೆ.
ಈ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಹಭಾಗಿ ದೇಶಗಳ ನಾಯಕರು ಮತ್ತು ವಿವಿಧ ಸಂಘಟನೆಗಳಿಂದ ಬಂದ ಗಣ್ಯ ಅತಿಥಿಗಳೊಟ್ಟಿಗೆ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅದರಲ್ಲೂ ಪ್ರಸ್ತುತವಾಗಿ ಬಹುಮುಖ್ಯ ವಿಷಯಗಳಾದ ಪರಿಸರ, ಇಂಧನ, ಹವಾಮಾನ, ಆಹಾರ ಸುರಕ್ಷತೆ, ಆರೋಗ್ಯ, ಉಗ್ರ ವಿರೋಧಿ ಹೋರಾಟ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ ಸಮಗ್ರ ಚರ್ಚೆ ನಡೆಯಲಿದೆ. ಅದರಾಚೆ ನರೇಂದ್ರ ಮೋದಿ ಕೆಲವು ದೇಶಗಳ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಶೃಂಗಸಭೆ ನಡೆಯಲಿರುವ ಸ್ಥಳದ ವಿಶೇಷತೆ
ಜರ್ಮನಿಯ ಸ್ಕ್ಲೋಸ್ ಎಲ್ಮೌ ಹೋಟೆಲ್‌ನಲ್ಲಿ ಈ ಬಾರಿ ಜಿ7 ಶೃಂಗಸಭೆ ನಡೆಯಲಿದ್ದು, ಈ ಸ್ಥಳ ಕೆಲವು ಕಾರಣಕ್ಕೆ ತುಂಬ ವಿಶೇಷವಾಗಿದೆ. ಜರ್ಮನಿಯ ದಕ್ಷಿಣದ ಅಂಚಿನಲ್ಲಿರುವ ಈ ಸ್ಥಳ ಆಸ್ಟ್ರೇಲಿಯಾ ಗಡಿಗೆ ಹತ್ತಿರ. ಜರ್ಮನಿ ಕೇಂದ್ರ ಭಾಗದಿಂದ ದೂರವೇ ಇದ್ದು, ಪ್ರತ್ಯೇಕವಾಗಿಯೇ ಇದೆ. ಮರ-ಗುಡ್ಡ-ಹಸಿರಿನ ಮಧ್ಯೆ ಇರುವ ಈ ಹೋಟೆಲ್‌ನಲ್ಲಿ ಎಸಿ (ಹವಾ ನಿಯಂತ್ರಕ) ಇಲ್ಲ. ಐಷಾರಾಮಿ ಹೋಟೆಲ್‌ಗಳಲ್ಲಿ ಎಸಿ ಇದ್ದೇ ಇರುತ್ತದೆ. ಆದರೆ ಈ ಹೋಟೆಲ್‌ನಲ್ಲಿ ಸುತ್ತಲಿರುವ ಮರಗಳು ನೈಸರ್ಗಿಕವಾಗಿಯೇ ತಂಪು ನೀಡುತ್ತವೆ. ಇಲ್ಲಿ ಯಾವ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ. ವಿಶ್ವನಾಯಕರ ಶೃಂಗಸಭೆಗಳು, ದ್ವಿಪಕ್ಷೀಯ ಮಾತುಕತೆಗಳನ್ನು ಆಯೋಜಿಸಲು ಇದೊಂದು ಸೂಕ್ತತಾಣವಾಗಿದೆ. ಅಂದಹಾಗೇ, ಈ ಹೋಟೆಲ್ ತುಂಬ ಹಳೇಯದು. ೧೯೧೪-೧೯೧೬ರ ಅವಧಿಯಲ್ಲಿ ಜೋಹಾನ್ಸ್ ಮುಲ್ಲರ್ ಎಂಬುವರು ಕಟ್ಟಿಸಿದ್ದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ; ಪ್ರಧಾನಿ ಮೋದಿ ಉಪಸ್ಥಿತಿ