Site icon Vistara News

Narendra Modi: ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗರಿ; ಹೊಸ ಇತಿಹಾಸ

PM Modi

PM Narendra Modi Receives Bhutan’s highest civilian honour Order Of The Druk Gyalpo

ಥಿಂಪು: ಹತ್ತಾರು ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಈಗ ಭೂತಾನ್‌ ಕೂಡ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಭೂತಾನ್‌ (Bhutan) ಅರಸ ಜಿಗ್ಮೆ ಖೇಸರ್‌ ನಾಮ್‌ಗ್ಯೆಲ್‌ ವಾಂಗ್ಚುಕ್‌ (Jigme Khesar Namgyel Wangchuck) ಅವರು ನರೇಂದ್ರ ಮೋದಿ ಅವರಿಗೆ ‘ಆರ್ಡರ್‌ ಆಫ್‌ ದಿ ಡ್ರಕ್‌ ಗ್ಯಾಲ್ಪೊ’ (Order of the Druk Gyalpo) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರೊಂದಿಗೆ, ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೊದಲ ಭೂತಾನ್‌ ಹೊರತಾದ ವ್ಯಕ್ತಿ ಎನಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, “ನಾನು ಈ ಪ್ರಶಸ್ತಿಯನ್ನು ವೈಯಕ್ತಿಕ ಎಂದು ಭಾವಿಸುವುದಿಲ್ಲ. ಇದು ಭಾರತದ 140 ಕೋಟಿ ಜನರಿಗೆ ಸಿಕ್ಕ ಗೌರವವಾಗಿದೆ. ಭೂತಾನ್‌ನಲ್ಲಿ ನಿಂತು ಭಾರತದ ಪ್ರತಿಯೊಬ್ಬ ನಾಗರಿಕರ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ. ಪ್ರಶಸ್ತಿ ನೀಡಿ ಗೌರವಿಸಿದ ಭೂತಾನ್‌ನ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ನಮನ ಸಲ್ಲಿಸುತ್ತೇನೆ” ಎಂದು ಹೇಳಿದರು.

‌ನರೇಂದ್ರ ಮೋದಿ ಅವರಿಗೆ ಗ್ರೀಸ್‌, ಫ್ರಾನ್ಸ್‌, ಪಪುವಾ ನ್ಯೂಗಿನಿಯಾ ಸೇರಿ ಹಲವು ದೇಶಗಳು ತಮ್ಮ ರಾಷ್ಟ್ರಗಳ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿವೆ. 2020ರಲ್ಲಿ ಅಮೆರಿಕದಿಂದ ʼಲೀಜನ್ ಆಫ್ ಮೆರಿಟ್ʼ, 2019ರಲ್ಲಿ ರಷ್ಯಾದಿಂದ ʼಆರ್ಡರ್ ಆಫ್ ಸೇಂಟ್ ಆಂಡ್ರ್ಯೂʼ, 2019ರಲ್ಲಿ ಯುಎಇಯಿಂದ ʼಆರ್ಡರ್ ಆಫ್ ಜಾಯೆದ್ʼ ಮತ್ತು ʼಆರ್ಡರ್ ಆಫ್ ಅಬ್ದುಲಜೀಜ್ ಅಲ್ʼ, 2016ರಲ್ಲಿ ಸೌದಿ ಅರೇಬಿಯಾದಿಂದ ʼಸೌದ್ʼ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಭೂತಾನ್ ಭೇಟಿ ವೇಳೆ ಮೋದಿ ಅವರು ಭೂತಾನ್‌ ಪ್ರದಾನಿ ತ್ಶೆರಿಂಗ್‌ ತೊಬ್ಗೆ ಅವರ ಜತೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಭಾರತ ಹಾಗೂ ಭೂತಾನ್‌ ನಡುವಿನ ಸಂಬಂಧ ವೃದ್ಧಿ, ವ್ಯಾಪಾರ ಒಪ್ಪಂದಗಳ ಕುರಿತು ಮಹತ್ವದ ಚರ್ಚೆ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಪರಸ್ಪರ ಆರ್ಥಿಕ ಸಹಕಾರ, ಸಂಪರ್ಕ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 2019ರಲ್ಲಿ ಕೊನೆಯ ಬಾರಿ ಮೋದಿ ಅವರು ಭೂತಾನ್‌ಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Modi Bhutan Visit: ಭೂತಾನ್‌ಗೆ ತೆರಳಿದ ಪ್ರಧಾನಿ ಮೋದಿ; ಇಷ್ಟೆಲ್ಲ ಇದೆ ನಿರೀಕ್ಷೆ

ನರೇಂದ್ರ ಮೋದಿ ಅವರು ಮಾರ್ಚ್‌ 21 ಹಾಗೂ ಮಾರ್ಚ್‌ 22ರಂದು ಭೂತಾನ್‌ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ, ಪಾರೋ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯ ಉಂಟಾದ ಕಾರಣ ಮೋದಿ ಭೂತಾನ್‌ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು. ಇದಾದ ಬಳಿಕ ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆ ನಡೆಸಿ ಮಾರ್ಚ್‌ 22 ಹಾಗೂ 23ರಂದು ಪ್ರವಾಸ ನಿಗದಿಪಡಿಸಿದರು ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version