Site icon Vistara News

Narendra Modi: ಕಾಶ್ಮೀರಲ್ಲಿ ಉಗ್ರರ ದಾಳಿ ಬೆನ್ನಲ್ಲೇ ದೋವಲ್‌ ಜತೆ ಮೋದಿ ಸಭೆ; ಉಗ್ರರ ನಿರ್ನಾಮಕ್ಕೆ ಸೂಚನೆ!

PMAY

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಇತ್ತೀಚೆಗೆ ಉಗ್ರರ ದಾಳಿಗಳು ಜಾಸ್ತಿಯಾಗಿವೆ. ಅದರಲ್ಲೂ, ಯಾತ್ರೆಗೆ ತೆರಳುವ ಹಿಂದುಗಳು, ನಾಗರಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡುತ್ತಿದ್ದು, ಕಣಿವೆಯಲ್ಲಿ ಭದ್ರತೆ ಕುರಿತು ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸೇರಿ ಹಲವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಕಾಶ್ಮೀರದಲ್ಲಿ ಉಗ್ರರ ನಿರ್ನಾಮಕ್ಕೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಎನ್‌ಎಸ್‌ಎ ಅಜಿತ್‌ ದೋವಲ್‌ ಸೇರಿ ಹಲವು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೋದಿ ಅವರು ಕಣಿವೆಯ ಭದ್ರತೆಯನ್ನು ಪರಿಶೀಲಿಸಿದರು. ಕಣಿವೆಯಲ್ಲಿ ಶಾಂತಿ ಸ್ಥಾಪನೆಯಾಗಬೇಕು. ಉಗ್ರರ ದಾಳಿಗಳನ್ನು ನಿಗ್ರಹಿಸಬೇಕು. ಗಡಿಯುದ್ದಕ್ಕೂ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸೂಕ್ಷ್ಮ ನೆಲೆಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು ಎಂದು ಸೂಚಿಸುವ ಜತೆಗೆ ಆಧುನಿಕ ತಂತ್ರಜ್ಞಾನದ ಬಳಕೆ, ಉಗ್ರರ ನಿಗ್ರಹಕ್ಕೆ ಇದುವರೆಗೆ ತೆಗೆದುಕೊಂಡ ಕ್ರಮಗಳ ಕುರಿತು ಕೂಡ ಮೋದಿ ಅವರು ಪರಿಶೀಲನೆ ನಡೆಸಿದರು ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಜಮ್ಮು-ಕಾಶ್ಮೀರದಲ್ಲಿರುವ ಶಿವ ಖೋರಿ ದೇವಸ್ಥಾನಕ್ಕೆ ಹಿಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಪಾಕಿಸ್ತಾನದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ದಾಳಿ ನಡೆಸಿದ್ದು, ಉಗ್ರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲದೆ, ಉಗ್ರನ ಕುರಿತು ಸುಳಿವು ನೀಡಿದರೆ 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ರಿಯಾಸಿಯಲ್ಲಿ ಉಗ್ರರ ದಾಳಿ ಸೇರಿ ಕಳೆದ ನಾಲ್ಕು ದಿನಗಳಲ್ಲಿ ಮೂರು ಕಡೆ ಉಗ್ರರು ದಾಳಿಗಳನ್ನು ನಡೆಸಿದ್ದಾರೆ. ಇದಾದ ನಂತರ ದೋಡಾದಲ್ಲಿ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದು, ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದೇ ವೇಳೆ ಒಬ್ಬ ಯೋಧ ಹುತಾತ್ಮರಾಗಿದ್ದರು. ಅಲ್ಲದೆ, ಕಥುವಾದಲ್ಲಿಯೂ ಉಗ್ರರು ನಡೆಸಿದ ದಾಳಿಯಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದರು. ಇದರಿಂದಾಗಿ ಕಣಿವೆಯಲ್ಲಿ ಭದ್ರತೆ ಕುರಿತು ಜನರಲ್ಲಿ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: Terrorist Attack : ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಯೋಧ ಹುತಾತ್ಮ , ಆರು ಯೋಧರಿಗೆ ಗಾಯ

Exit mobile version