ನವದೆಹಲಿ: ಏಕ ಭೂಮಿ, ಏಕ ಕುಟುಂಬ ಮತ್ತು ಏಕ ಭವಿಷ್ಯ ವಿಚಾರದೊಂದಿಗೆ ಜಿ20 ಅಧ್ಯಕ್ಷತೆಯನ್ನು ಭಾರತವು ನೇತೃತ್ವವನ್ನು ವಹಿಸಿಕೊಳ್ಳುತ್ತಿದೆ. ಭಾರತದ ಈ ವಿಚಾರಗಳು ಈ ವಿಶ್ವದ ಕಲ್ಯಾಣಕ್ಕೆ ಮಾರ್ಗವನ್ನು ರೂಪಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಭಾರತವು ಜಿ20 ಗ್ರೂಪಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿ20 ಸಮಾವೇಶದ ಲೋಗೋ, ಥೀಮ್ ಮತ್ತು ಜಾಲತಾಣಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು(G20 Logo India).
ಡಿ.1ರಿಂದ ಭಾರತದಲ್ಲಿ ಜಿ20 ಶೃಂಗ ನಡೆಯಲಿದೆ. ಇದೊಂದು ಐತಿಹಾಸಿಕ ಸಂಗತಿಯಾಗಿದೆ. ವಸುದೈವ ಕುಟುಂಬಕಂ ಎಂಬುದು ನಮ್ಮ ಸಂಸ್ಕೃತಿಯಾಗಿದೆ. ಲೋಗದಲ್ಲಿರುವ ಕಮಲವು ಸಂಸ್ಕೃತಿ, ಪರಂಪರೆ ಮತ್ತು ಭಾರತದ ನಂಬಿಕೆಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.
ಇದು ಕೇವಲ ಕೇಂದ್ರ ಸರ್ಕಾರದ ಕಾರ್ಯಕ್ರಮವಲ್ಲ. ಇದು ಎಲ್ಲ ರಾಜ್ಯಗಳ, ಎಲ್ಲ ಭಾರತೀಯ ಕಾರ್ಯಕ್ರಮವಾಗಿದೆ. ನಮ್ಮ ಹೆಮ್ಮೆಯ ಅತಿಥಿ ದೇವೋಭವ ಸಂಸ್ಕೃತಿಯನ್ನು ಪರಿಚಯಿಸಲು ಈ ಜಿ20 ಅಧ್ಯಕ್ಷತೆಯು ಅವಕಾಶವನ್ನು ಸೃಷ್ಟಿಸಲಿದೆ. ಹಾಗಾಗಿ, ಈ ಕಾರ್ಯಕ್ರಮವು ಕೇವಲ ದಿಲ್ಲಿಗೆ ಮಾತ್ರವೇ ಸಿಮೀತವಾಗಿರುವುದಲ್ಲ. ದೇಶದ ದೇಶದ ಮೂಲೆ ಮೂಲೆಗಳನ್ನು ತಲುಪಲಿದೆ. ನಮ್ಮ ಎಲ್ಲ ರಾಜ್ಯಗಳು ತಮ್ಮದೇ ಪರಂಪರೆ, ವಿಶೇಷತೆಗಳು, ವಿಶಿಷ್ಟತೆಗಳನ್ನು, ಸಂಸ್ಕೃತಿಯನ್ನು ಹೊಂದಿವೆ. ಇದನ್ನೆಲ್ಲ ಅಂತಾರಾಷ್ಟ್ರೀಯವಾಗಿ ಪ್ರದರ್ಶಿಸಲು ಇದೊಂದು ದೊಡ್ಡ ಅವಕಾಶ ಎಂದು ಅವರು ಹೇಳಿದರು.
ಜಿ20 ಶೃಂಗದಲ್ಲಿ ಭಾರತವು ಸುಮಾರು 200 ಮೀಟಿಂಗ್‌ಗಳನ್ನು ಮಾಡಲಿದೆ. ಭಾರತದ ವಿವಿಧ ಸ್ಥಳಗಳಲ್ಲಿ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಈ ಸಭೆಗಳು ನಡೆಯಲಿವೆ ಎಂದು ಪ್ರಧಾನಿ ತಿಳಿಸಿದರು.
ನಮ್ಮ ದೇಶದ ವೈವಿಧ್ಯತೆಯನ್ನು ಇಡೀ ಜಗತ್ತಿಗೆ ತೋರಿಸೋಣ. ಮುಂದಿನ ವಾರ ನಾನು ಇಂಡೋನೇಷ್ಯಾಗೆ ತೆರಳುತ್ತಿದ್ದೇನೆ. ಅಲ್ಲಿ ಅಧಿಕೃತವಾಗಿ ಜಿ20 ಅಧ್ಯಕ್ಷತೆಯು ಭಾರತಕ್ಕೆ ಹಸ್ತಾಂತರವಾಗಲಿದೆ. ಹಾಗಾಗಿ, ನಾನು ಎಲ್ಲ ರಾಜ್ಯಗಳಿಗೆ ಆಗ್ರಹಿಸುತ್ತೇನೆ, ಈ ಅವಕಾಶವನ್ನು ಬಳಸಿಕೊಳ್ಳಿ. ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ಈಗ ಲಾಂಚ್ ಆಗಿರುವ ಜಾಲತಾಣದಲ್ಲಿ ತಮ್ಮ ಸಲಹೆ, ಸೂಚನೆಗಳನ್ನು ನೀಡಬಹುದಾಗಿದೆ. ಈ ಕಾರ್ಯಕ್ರಮವು ಭಾರತಕ್ಕೆ ಸ್ಮರಣೀಯ ಆಗುವುದು ಮಾತ್ರವಲ್ಲ, ವಿಶ್ವದ ಇತಿಹಾಸದಲ್ಲಿ ಮಹತ್ವದ ಅವಕಾಶವಾಗಿ ನೆನಪಿನಲ್ಲಿ ಉಳಿಯಲಿದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ | NITI Aayog Meet | ನೀತಿ ಆಯೋಗದ ಸಭೆಯಲ್ಲಿ ಸ್ವಾವಲಂಬನೆ ಚರ್ಚೆ; ರಾಜ್ಯಗಳನ್ನು ಹೊಗಳಿದ ಪ್ರಧಾನಿ