Site icon Vistara News

PM Narendra Modi: ರೈತರಿಗೆ ನೀಡಿದ ಭರವಸೆ ಈಡೇರಿಸಲು ಬದ್ಧ: ಕಬ್ಬು ಬೆಲೆ ಏರಿಸಿದ ಬಳಿಕ ನರೇಂದ್ರ ಮೋದಿ ಸ್ಪಷ್ಟೋಕ್ತಿ

PM narendra modi sugarcane

ಹೊಸದಿಲ್ಲಿ: ದೇಶದ ರೈತರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಗುರುವಾರ ಹೇಳಿದ್ದಾರೆ. ಕೇಂದ್ರವು ಕಬ್ಬಿನ (Sugarcane) ಎಫ್‌ಆರ್‌ಪಿಯನ್ನು (Fair and Remunerative Price- FRP – ನ್ಯಾಯಯುತ ಹಾಗೂ ಲಾಭದಾಯಕ ಬೆಲೆ) ಕ್ವಿಂಟಲ್‌ಗೆ ₹25ರಿಂದ ₹340ಕ್ಕೆ ಹೆಚ್ಚಿಸಿದ ನಂತರ ಅವರ ಹೇಳಿಕೆ ಬಂದಿದೆ.

“ದೇಶದಾದ್ಯಂತ ಇರುವ ನಮ್ಮ ರೈತ ಸಹೋದರ ಸಹೋದರಿಯರ ಕಲ್ಯಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ನಿರ್ಣಯವನ್ನೂ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬು ಖರೀದಿಯ ಐತಿಹಾಸಿಕ ಬೆಲೆ ಏರಿಕೆಗೆ ಅನುಮೋದನೆ ನೀಡಲಾಗಿದೆ. ಈ ಕ್ರಮವು ನಮ್ಮ ಕಬ್ಬು ಉತ್ಪಾದಿಸುವ ಕೋಟ್ಯಂತರ ರೈತರಿಗೆ ಪ್ರಯೋಜನವನ್ನು ನೀಡಲಿದೆ” ಎಂದು ಅವರು Xನಲ್ಲಿ ಹಾಕಿದ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅಕ್ಟೋಬರ್‌ನಿಂದ ಪ್ರಾರಂಭವಾಗುವ 2024-25ನೇ ಹಂಗಾಮಿಗೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಕನಿಷ್ಠ ಬೆಲೆಯನ್ನು ಕ್ವಿಂಟಲ್‌ಗೆ ₹25ರಿಂದ ₹340ರಷ್ಟು ಹೆಚ್ಚಿಸಲು ಸರ್ಕಾರ ಬುಧವಾರ ನಿರ್ಧರಿಸಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಬ್ಬಿಗೆ ಘೋಷಿಸಿದ ಅತ್ಯಧಿಕ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಇದಾಗಿದೆ. ಪ್ರಮಾಣಕ್ಕೆ ಸಂಬಂಧಿಸಿದಂತೆ, ಮೋದಿ ಸರ್ಕಾರವು ಎರಡನೇ ಬಾರಿಗೆ ಎಫ್‌ಆರ್‌ಪಿ ಹೆಚ್ಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಎಫ್‌ಆರ್‌ಪಿ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ತೆಗೆದುಕೊಳ್ಳಲಾದ ಗಮನಾರ್ಹ ನಿರ್ಧಾರ ಇದಾಗಿದೆ.

ಕಬ್ಬನ್ನು ಮುಖ್ಯವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. “ಇದು ಕಬ್ಬಿನ ಐತಿಹಾಸಿಕ ಬೆಲೆಯಾಗಿದ್ದು, ಪ್ರಸಕ್ತ ಋತುವಿನ 2023-24ರ ಕಬ್ಬಿನ FRPಗಿಂತ ಸುಮಾರು 8 ಶೇಕಡಾ ಹೆಚ್ಚಾಗಿದೆ” ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಬೆಂಬಲಕ್ಕೆ ಒತ್ತಾಯಿಸುತ್ತಿರುವ ಪಂಜಾಬ್‌ನ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆಯ ನಡುವೆಯೇ ಪ್ರಧಾನಿ ಮೋದಿಯವರ ಈ ಹೇಳಿಕೆ ಬಂದಿದೆ. ಬುಧವಾರ ಪಂಜಾಬ್- ಹರಿಯಾಣ ಶಂಭು ಗಡಿಯಲ್ಲಿ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಈ ಹೋರಾಟದಲ್ಲಿ ಒಬ್ಬ ಪ್ರತಿಭಟನಾಕಾರ ಸಾವನ್ನಪ್ಪಿದ್ದು, 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: FRP Hike: ರೈತರಿಗೆ ಮೋದಿ ಗುಡ್‌ನ್ಯೂಸ್;‌ ಕಬ್ಬಿನ ಪ್ರೋತ್ಸಾಹಧನ 25 ರೂ. ಏರಿಕೆ

Exit mobile version