ಮುಂಬಯಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಇಂದು ಪುಣೆಯಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ್ (lokmanya bal gangadhar tilak) ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪಕ್ಷದ ಹಾಗೂ ವಿಪಕ್ಷ ಒಕ್ಕೂಟದ ನಾಯಕರ ಅಸಮ್ಮತಿಯ ನಡುವೆಯೂ ಎನ್‌ಸಿಪಿ ನಾಯಕ ಶರದ್ ಪವಾರ್ (Sharad pawar) ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶರದ್ ಪವಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ವೇದಿಕೆಯಲ್ಲಿ ಅವರು ಶರದ್ ಅವರ ಕೈಕುಲುಕಿ ಒಂದೆರಡು ಕ್ಷಣಗಳ ಚಿಟ್‌ಚಾಟ್ ನಡೆಸಿದ್ದು ಕಂಡುಬಂತು. ಮೋದಿ ಅವರು ಪುಣೆಯ ದಗ್ಡು ಶೇಟ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಪುಣೆ ಕಾರ್ಯಕ್ರಮವನ್ನು ಆರಂಭಿಸಿದ್ದರು.
ʼʼಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಲು ಹೆಮ್ಮೆಯೆನಿಸುತ್ತದೆ. ಸಾವರ್ಕರ್ ಅವರಂತೆಯೇ ತಿಲಕ್ ಕೂಡ ಭವಿಷ್ಯದ ತಲೆಮಾರನ್ನು ಗುರುತಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಅಪಾರʼʼ ಎಂದು ಮೋದಿ ನುಡಿದರು. ʼʼಈ ಹಿಂದೆ ಹಲವಾರು ಪ್ರಮುಖ ವ್ಯಕ್ತಿಗಳಿಗೆ ಲೋಕಮಾನ್ಯ ತಿಲಕ್ ಪ್ರಶಸ್ತಿಯನ್ನು ನೀಡಲಾಗಿದೆ. ಅದರಂತೆ ಇಂದು ಮೋದಿಯವರಿಗೆ ಇದನ್ನು ನೀಡಲಾಗುತ್ತಿದೆʼʼ ಎಂದು ಶರದ್ ಪವಾರ್ ತಮ್ಮ ಚುಟುಕಾದ ಭಾಷಣದಲ್ಲಿ ಹೇಳಿದರು.
ಇದೇ ವೇಳೆ ಮೋದಿಯವರು ಪಿಂಪ್ರಿ ಚಿಂಚ್‌ವಾಡ್ ಮತ್ತು ಪುಣೆಯನ್ನು ಸಂಪರ್ಕಿಸುವ ಹೊಸ ಮೆಟ್ರೋ ರೈಲು ಮಾರ್ಗವನ್ನೂ ಉದ್ಘಾಟಿಸಲಿದ್ದಾರೆ. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಅಡಿಪಾಯ ಹಾಕಲಿದ್ದಾರೆ.
ಅಜಿತ್ ಪವಾರ್ ನೇತೃತ್ವದ ಒಂದು ಬಣವು ಇತ್ತೀಚೆಗೆ ಶರದ್ ಪವಾರ್ ಅವರನ್ನು ವಿರೋಧಿಸಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ಯನ್ನು ಒಡೆದು ರಾಜ್ಯದಲ್ಲಿ ಬಿಜೆಪಿ- ಶಿವಸೇನೆ ಸಮ್ಮಿಶ್ರ ಸರ್ಕಾರವನ್ನು ಸೇರಿತ್ತು. ಅಜಿತ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಜೆಪಿ ಇರುವುದರಿಂದ, ಮೋದಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮದಲ್ಲಿ ಪವಾರ್ ಭಾಗವಹಿಸಲಾರರು ಎಂದು ತರ್ಕಿಸಲಾಗಿತ್ತು. ಆದರೆ ಪೂರ್ವನಿರ್ಧರಿತ ಕಾರ್ಯಕ್ರಮದಲ್ಲಿ ಪವಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ʼʼಶರದ್ ಪವಾರ್ ಅವರು ಈ ಕಾರ್ಯಕ್ರಮಕ್ಕೆ ಬೆನ್ನು ತಿರುಗಿಸಿದ್ದರೆ ಮೋದಿಯವರಿಗೆ ಸರಿಯಾದ ಪ್ರತಿಕ್ರಿಯೆ ನೀಡಿದಂತಾಗುತ್ತಿತ್ತುʼʼ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಮುಖವಾಣಿ ʼಸಾಮ್ನಾʼ ಹೇಳಿತ್ತು. ವಿಪಕ್ಷ ಒಕ್ಕೂಟ ʼಇಂಡಿಯಾʼದ ಮುಖಂಡರು ಕೂಡ ಪವಾರ್ ಇದರಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿದ್ದರು. ಆದರೆ ಪವಾರ್ ಉಪಸ್ಥಿತಿಯಿಂದಾಗಿ ʼಇಂಡಿಯಾʼ ಕೂಟದ ನಾಯಕರಿಗೆ ಇರಸುಮುರಸು ಉಂಟಾಗಿದೆ.
ಲೋಕಮಾನ್ಯ ಪ್ರಶಸ್ತಿಗೆ ಭಾಜನರಾದ 41ನೇ ವ್ಯಕ್ತಿ ಮೋದಿ. ಇದನ್ನು ಈ ಹಿಂದೆ ಡಾ. ಶಂಕರ್ ದಯಾಳ್ ಶರ್ಮಾ, ಪ್ರಣಬ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ, ಬಾಳಾಸಾಹೇಬ್ ದೇವರಸ್, ಮನಮೋಹನ್ ಸಿಂಗ್, ಎನ್.ಆರ್ ನಾರಾಯಣ ಮೂರ್ತಿ, ಇ ಶ್ರೀಧರನ್ ಮುಂತಾದ ಗಣ್ಯರಿಗೆ ನೀಡಲಾಗಿದೆ.
ಇದನ್ನೂ ಓದಿ: India TV-CNX Opinion Poll: 3ನೇ ಅವಧಿಗೆ ಮೋದಿ ಪಿಎಂ! ‘ಇಂಡಿಯಾ’ಗಿಲ್ಲ ಲಕ್! ನೆಹರು ದಾಖಲೆ ಸರಿಗಟ್ಟಲಿರುವ ಮೋದಿ