ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದಕ್ಕೆ, ದಲಿತರನ್ನು ಸೋಲಿಸಿದರು, ದಲಿತರಿಗೆ ಅನ್ಯಾಯವಾಯಿತು ಎಂದು ಮಾಡುತ್ತಿದ್ದ ಟೀಕೆಗೆ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿಯೇ (PM Modi Speech In Rajya Sabha) ಪ್ರತ್ಯುತ್ತರ ನೀಡಿದರು. “ಖರ್ಗೆ ಅವರು ಸೋತಿದ್ದಕ್ಕೆ ದಲಿತರನ್ನು ಸೋಲಿಸಿದರು ಎನ್ನುವುದು ಸರಿಯಲ್ಲ. ಅಲ್ಲಿನ ಜನ ಆಯ್ಕೆ ಮಾಡಿದ್ದು ಮತ್ತೊಬ್ಬ ದಲಿತನನ್ನೇ” ಎಂದು ಹೇಳಿದರು.
ಇನ್ನು ಕರ್ನಾಟಕಕ್ಕೆ ಬಂದಾಗ ಖರ್ಗೆ ಟೀಕಿಸುವುದಕ್ಕೆ ಪ್ರತ್ಯುತ್ತರ ನೀಡಿದ ಮೋದಿ, “ನಾನು ಕರ್ನಾಟಕಕ್ಕೆ ತೆರಳಿದಾಗಲೆಲ್ಲ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸುತ್ತಾರೆ. ಕಲಬುರಗಿಗೆ ಭೇಟಿ ನೀಡಿದಾಗಲೂ ಅವರು ದೂರುತ್ತಾರೆ. ಆದರೆ, ಖರ್ಗೆ ನಾಡಾದ ಕರ್ನಾಟಕದಲ್ಲಿ ೧.೭ ಕೋಟಿ ಜನ ಧನ್ ಖಾತೆಗಳನ್ನು ತರೆಯಲಾಗಿದೆ. ಅಷ್ಟೇ ಏಕೆ, ಕಲಬುರಗಿಯಲ್ಲೇ ೮ ಲಕ್ಷ ಖಾತೆಗಳನ್ನು ತೆರೆಯಲಾಗಿದೆ” ಎಂದರು.
“ಜನರ ಖಾತೆ ತೆರೆದರೆ, ಅವರು ಅಭಿವೃದ್ಧಿಯಾದರೆ ತುಂಬ ಜನರಿಗೆ ಖುಷಿಯಾಗುತ್ತದೆ. ಆದರೆ, ಕೆಲವರಿಗೆ ಅದೇ ನೋವುಂಟು ಮಾಡುತ್ತದೆ. ಹಾಗೆಯೇ, ಜನ ಖರ್ಗೆಯವರ ಗೆಲುವಿನ ಖಾತೆಯನ್ನು ಜನ ಮುಚ್ಚಿದರು. ಇದರಿಂದಾಗಿ ಅವರಿಗೆ ನೋವಾಗಿದೆ” ಎಂದು ಕುಟುಕಿದರು.
ಇದನ್ನೂ ಓದಿ: Modi Adani Bhai Bhai: ಮೋದಿ ಅದಾನಿ ಭಾಯಿ ಭಾಯಿ, ಮೇಲ್ಮನೆಯಲ್ಲಿ ಮೋದಿಗೆ ತಿರುಗೇಟು ಕೊಟ್ಟ ಪ್ರತಿಪಕ್ಷಗಳು