Site icon Vistara News

Narendra Modi: ಚುನಾವಣೆ ಪ್ರಚಾರದ ವೇಳೆ 5 ಗ್ಯಾರಂಟಿಗಳನ್ನು ಘೋಷಿಸಿದ ಮೋದಿ; ಏನವು?

Narendra Modi

PM Narendra Modi Slams TMC In West Bengal, makes 5 big guarantees for the state

ಕೋಲ್ಕೊತಾ: ಲೋಕಸಭೆ ಚುನಾವಣೆಯ (Lok Sabha Election 2024) ಮೂರು ಹಂತದ ಮತದಾನ ಮುಗಿದು, ನಾಲ್ಕನೇ ಹಂತದ ಮತದಾನಕ್ಕೆ ಕೆಲವೇ ಗಂಟೆ ಬಾಕಿ ಇವೆ. ಇದರ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಶ್ಚಿಮ ಬಂಗಾಳದಲ್ಲಿ (West Bengal) ಅಬ್ಬರದ ಪ್ರಚಾರ ಮಾಡಿದ್ದಾರೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (TMC) ವಿರುದ್ಧ ವಾಗ್ದಾಳಿ ನಡೆಸುವ ಜತೆಗೆ ಮೋದಿ ಅವರು ಪಶ್ಚಿಮ ಬಂಗಾಳಕ್ಕಾಗಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದರು.

ಪಶ್ಚಿಮ ಬಂಗಾಳದ ಪರಾಕ್‌ಪುರದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಅವರು, “ನಾನು ಪಶ್ಚಿಮ ಬಂಗಾಳದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡುತ್ತಿದ್ದೇನೆ. ನಾನು ಇರುವವರೆಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಬಿಡಲ್ಲ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸಲು ಬಿಡುವುದಿಲ್ಲ. ನೀವು ರಾಮನವಮಿಯನ್ನು ಆಚರಿಸುವುದನ್ನು ತಡೆಯಲು ಯಾರಿಂದಲೂ ಆಗಲ್ಲ. ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಯನ್ನು ತಡೆಯಲು ಬಿಡುವುದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಯಾರಿಂದಲೂ ಬದಲಿಸಲು ಬಿಡಲ್ಲ” ಎಂದು ಮೋದಿ ಅವರು ಐದು ಗ್ಯಾರಂಟಿಗಳನ್ನು ಘೋಷಿಸಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಭಾಷಣದ ವೇಳೆ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. “ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್‌ನ ಒಂದು ಕುಟುಂಬದ ಸದಸ್ಯರು ದೇಶವನ್ನು ದಶಕಗಳವರೆಗೆ ಆಳಿದರು. ಆದರೆ, ಅವರು ಪೂರ್ವ ಭಾರತದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದರು. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾ ಸೇರಿ ಹಲವು ರಾಜ್ಯಗಳ ಅಭಿವೃದ್ಧಿಯನ್ನು ಕಾಂಗ್ರೆಸ್‌ ಕಡೆಗಣಿಸಿತು. ಆದರೆ, ನೀವು 2014ರಲ್ಲಿ ಮೋದಿಯನ್ನು ಆಯ್ಕೆ ಮಾಡಿದಿರಿ. ಹಾಗಾಗಿ, ಈಗ ಇಡೀ ದೇಶವೇ ಏಳಿಗೆ ಹೊಂದುತ್ತಿದೆ. ಆರ್ಥಿಕತೆಯಲ್ಲಿ ನಾವು ದಾಪುಗಾಲು ಇಡುತ್ತಿದ್ದೇವೆ” ಎಂದರು.

ಪ್ರಧಾನಿ ರೋಡ್‌ ಶೋ

ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರಕ್ಕೂ ಮೋದಿ ಚಾಟಿ ಬೀಸಿದರು. “ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಒಂದು ಕಾಲದಲ್ಲಿ ವೈಜ್ಞಾನಿಕ ಆವಿಷ್ಕಾರಗಳಿಗೆ ಬಂಗಾಳ ಖ್ಯಾತಿಯಾಗಿತ್ತು. ಆದರೆ, ಈಗ ರಾಜ್ಯದಲ್ಲಿ ಬಾಂಬ್‌ ತಯಾರಿಕೆ ಉದ್ಯಮವೇ ಹುಟ್ಟಿಕೊಂಡಿದೆ. ಒಂದು ಕಾಲದಲ್ಲಿ ಬಂಗಾಳದಲ್ಲಿ ಒಳನುಸುಳುಕೋರರ ವಿರುದ್ಧ ಕ್ರಾಂತಿ ನಡೆದಿತ್ತು. ಈಗ ನುಸುಳುಕೋರರಿಗೆ ರಾಜ್ಯದಲ್ಲಿ ರಕ್ಷಣೆ ನೀಡಲಾಗುತ್ತಿದೆ” ಎಂದು ವಾಗ್ದಾಳಿ ನಡೆಸಿದರು. ಅಲ್ಲದೆ, ಬರಾಕ್‌ಪುರದಲ್ಲಿ ಮೋದಿ ಅಬ್ಬರದ ರೋಡ್‌ ಶೋ ಕೂಡ ಕೈಗೊಂಡರು.

ಇದನ್ನೂ ಓದಿ: ಮೋದಿಯಿಂದ ಯೋಗಿ ಆದಿತ್ಯನಾಥ್‌ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್‌ ಸ್ಫೋಟಕ ಭವಿಷ್ಯ

Exit mobile version