Site icon Vistara News

Gujarat Election Result | ʼನರೇಂದ್ರʼನ ದಾಖಲೆ ಮುರಿದ ʼಭೂಪೇಂದ್ರʼ ಎಂದ ಮೋದಿ!, ಕಾರ್ಯಕರ್ತರಿಗೆ ಅಭಿನಂದನೆ

PM Narendra Modi

ನವದೆಹಲಿ: ಗುಜರಾತ್‌ನಲ್ಲಿ ಬಿಜೆಪಿ ಸಾಧಿಸಿದ ಗೆಲುವಿನ (Gujarat Election Result) ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. “ಜಾತಿ, ಮತ, ಪರಿವಾರವನ್ನು ನೋಡದೆ ಗುಜರಾತ್‌ನ ಜನ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲೂ ರಾಜ್ಯದ ಜನರ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತೇವೆ. ಈ ಫಲಿತಾಂಶವು ದೇಶದ ಏಳಿಗೆಗೆ ಹೊಸ ದಿಕ್ಕು ನೀಡಿದೆ. ರಾಜ್ಯದಲ್ಲಿ ‘ನರೇಂದ್ರ’ನ ದಾಖಲೆಯನ್ನು ‘ಭೂಪೇಂದ್ರ’ ಮುರಿದರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗುಜರಾತ್‌ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. “ಗುಜರಾತ್‌ನಲ್ಲಿರುವ ಪಕ್ಷದ ಮುಖಂಡರು, ನಾಯಕರು, ನಾಗರಿಕರಿಗೆ ಅಭಿನಂದನೆಗಳು. ನಾನು ಚುನಾವಣೆ ಭಾಷಣದ ವೇಳೆಯೇ ಹೇಳಿದ್ದೆ. ನರೇಂದ್ರ ಮೋದಿಯ ದಾಖಲೆಯನ್ನು ಮುರಿಯಬೇಕು ಎಂದು ಹೇಳಿದ್ದೆ. ಅದರಂತೆ, ಗುಜರಾತ್‌ ಜನ ನನ್ನ ದಾಖಲೆಯನ್ನೂ ಮುರಿದರು. ಭೂಪೇಂದ್ರ ಪಟೇಲ್‌ ಅವರನ್ನು ಗೆಲ್ಲಿಸಿದರು. ಅಷ್ಟಕ್ಕೂ ರಾಜ್ಯದ ಜನ ದಾಖಲೆ ಮುರಿಯುವುದರಲ್ಲಿ ನಿಸ್ಸೀಮರು” ಎಂದರು.

“ಗುಜರಾತ್‌ ವಿಧಾನಸಭೆ ಚುನಾವಣೆಯು ಅಭಿವೃದ್ಧಿಯ ಸಂಕೇತವಾಗಿದೆ. ಯುವಕರು ವಿಕಾಸವನ್ನು ಮಾತ್ರ ಬೆಂಬಲಿಸುತ್ತಾರೆ ಎಂಬುದರ ದ್ಯೋತಕವಾಗಿದೆ. ಇದು ದೇಶದ ಗತಿ ಬದಲಾವಣೆಗೂ ದಿಕ್ಸೂಚಿ ಎನಿಸಲಿದೆ. ಗುಜರಾತ್‌ ಚುನಾವಣೆ ಫಲಿತಾಂಶವು ಹೊಸ ದಿಸೆ ನೀಡಿದೆ” ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆ ಮೇಲೆ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಆಸೀನರಾಗಿದ್ದರು.

ಹಿಮಾಚಲದ ಅಭಿವೃದ್ಧಿಗೆ ಬದ್ಧ: ಮೋದಿ

“ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ನಾವು ಹಿಮಾಚಲ ಪ್ರದೇಶದ ಅಭಿವೃದ್ಧಿಗೆ ಸಕಲ ರೀತಿಯಲ್ಲಿ ನೆರವು ನೀಡುತ್ತೇವೆ. ಕೇಂದ್ರ ಸರ್ಕಾರವು ಎಲ್ಲ ನೆರವು ಒದಗಿಸಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ಒಗ್ಗೂಡಿ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು” ಎಂದು ತಿಳಿಸಿದರು.

“ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮದಿಂದ ಗುಜರಾತ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಿಮಾಚಲ ಪ್ರದೇಶ ಸೇರಿ ಯಾವುದೇ ರಾಜ್ಯದಲ್ಲಿ ಬಿಜೆಪಿ ಗೆಲ್ಲದಿದ್ದರೂ, ಮತಗಳಿಕೆಯಲ್ಲಿ ಮುಂದಿದೆ. ಇದರ ಅರ್ಥವು ಜನ ಬಿಜೆಪಿ ಪರ ಇದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಹೇಳಿದರು.

ದೇಶಕ್ಕೆ ಶಾರ್ಟ್‌ಕಟ್‌ ಬೇಕಿಲ್ಲ
“ದೇಶದ ಮತದಾರರು ಜಾಗೃತರಾಗಿದ್ದಾರೆ. ದೇಶದ ಅಭಿವೃದ್ಧಿಗೆ ಈಗ ಶಾರ್ಟ್‌ಕಟ್‌ ಬೇಕಿಲ್ಲ. ಮತದಾರರು ಜಾಗೃತರಾಗಿದ್ದು, ಯಾರನ್ನು ಗೆಲ್ಲಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಓಲೈಕೆ, ಜಾತಿ, ಮತ, ಪಂಥದ ಆಧಾರದ ಮೇಲೆ ರಾಜಕಾರಣಿಗಳನ್ನು ಗೆಲ್ಲಿಸುವ ಕಾಲ ದೂರವಾಗಿದೆ. ಈಗೇನಿದ್ದರೂ, ದೂರದೃಷ್ಟಿ, ಬಡವರ ಏಳಿಗೆ, ಮೂಲ ಸೌಕರ್ಯ, ಜನರಿಗೆ ತಲುಪುವ ಯೋಜನೆಗಳು, ಸರ್ಕಾರದ ನೀತಿ-ನಿರೂಪಣೆಗಳನ್ನು ನೋಡಿಯೇ ಜನ ಸರ್ಕಾರಗಳನ್ನು ಆಯ್ಕೆ ಮಾಡುತ್ತಿದ್ದಾರೆ” ಎಂದು ಪ್ರತಿಪಕ್ಷಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಚುನಾವಣೆ ಆಯೋಗಕ್ಕೆ ಮೋದಿ ಧನ್ಯವಾದ
ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ದಕ್ಷವಾಗಿ ಚುನಾವಣೆ ನಡೆಸಿದ ಚುನಾವಣೆ ಆಯೋಗಕ್ಕೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. “ಎರಡೂ ರಾಜ್ಯದಲ್ಲಿ ನಡೆದ ಚುನಾವಣೆ ವೇಳೆ ಒಂದೇ ಒಂದು ಬೂತ್‌ನಲ್ಲಿ ಮರು ಮತದಾನ ನಡೆದಿಲ್ಲ. ಇಷ್ಟು ದಕ್ಷವಾಗಿ ಆಯೋಗವು ಕಾರ್ಯನಿರ್ವಹಿಸಿದೆ” ಎಂದು ತಿಳಿಸಿದರು.

ಮೋದಿ ಮೋದಿ ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸುತ್ತಲೇ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ನರೇಂದ್ರ ಮೋದಿ ಜಿಂದಾಬಾದ್‌, ಮೋದಿ ಮೋದಿ, ಭಾರತ್‌ ಮಾತಾ ಕೀ ಜೈ ಎಂಬುದು ಸೇರಿ ಹಲವು ಘೋಷಣೆಗಳನ್ನು ಕೂಗಿದರು.

ಐತಿಹಾಸಿಕ ದಿನ ಎಂದ ನಡ್ಡಾ
“ಪಕ್ಷದ ಕಾರ್ಯಕರ್ತರ ಪರವಾಗಿ, ಮುಖಂಡರ ಪರವಾಗಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಗುಜರಾತ್‌ ಕಾರ್ಯಕರ್ತರು, ಮುಖಂಡರಿಗೂ ಕೂಡ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, “ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಗುಜರಾತ್‌ನಲ್ಲಿ ಬಿಜೆಪಿ ಬಹುದೊಡ್ಡ ಗೆಲುವು ಸಾಧಿಸಿದೆ. ಇದೆಲ್ಲ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ತತ್ವದಡಿಯಲ್ಲಿ ನರೇಂದ್ರ ಮೋದಿ, ಬಿಜೆಪಿ ಕಾರ್ಯನಿರ್ವಹಿಸಿರುವುದರ ಫಲವಾಗಿದೆ. ಬಡವರು, ದೀನ-ದಲಿತರು ಸೇರಿ ಸರ್ವರ ಏಳಿಗೆಗಾಗಿ ಶ್ರಮಿಸಿದ ಕಾರಣ ಜನ ನಮ್ಮನ್ನು ಬೆಂಬಲಿಸಿದ್ದಾರೆ” ಎಂದರು.

ಇದನ್ನೂ ಓದಿ | Gujarat Election Result | ನೀವು ನೀಡಿದ ಗೆಲುವು ಕಂಡು ಹೃದಯ ತುಂಬಿ ಬಂದಿದೆ, ಗುಜರಾತ್‌ ಜನರಿಗೆ ಮೋದಿ ಧನ್ಯವಾದ

Exit mobile version