Site icon Vistara News

ಫೆ.19ರಂದು ಮುಂಬೈ ಕರಾವಳಿ ರಸ್ತೆ ಲೋಕಾರ್ಪಣೆ ಮಾಡಲಿರುವ ಮೋದಿ; ಏನಿದರ ವಿಶೇಷ?

Mumbai Coastal Road Project

PM Narendra Modi To Inaugurate 1st Phase Of Mumbai's Coastal Road on Feb 19; All You Need To Know

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ದೇಶದ ಅತಿ ಉದ್ದದ ಸಮುದ್ರ ಸೇತುವೆ, ‘ಅಟಲ್‌ ಸೇತು’ (Atal Setu) ಎಂದು ಕರೆಯಲಾಗುವ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ ಅನ್ನು ಉದ್ಘಾಟಿಸಿದ ಕೆಲವೇ ದಿನಗಳಲ್ಲಿ ಮುಂಬೈನಲ್ಲಿ ಮತ್ತೊಂದು ಪ್ರಮುಖ ರಸ್ತೆ ಲೋಕಾರ್ಪಣೆಯಾಗಲಿದೆ. ಛತ್ರಪತಿ ಸಂಭಾಜಿ ಮಹಾರಾಜ್‌ ಕರಾವಳಿ ರಸ್ತೆ ಯೋಜನೆಯ (Chhatrapati Sambhaji Maharaj Mumbai Coastal Coad Project) ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫೆಬ್ರವರಿ 19ರಂದು ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಫೆಬ್ರವರಿ 20ರಿಂದ ರಸ್ತೆಯು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ಏನಿದು ಕೋಸ್ಟಲ್‌ ರೋಡ್‌ ಯೋಜನೆ?

ಮುಂಬೈನ ಮರಿನ್‌ ಡ್ರೈವ್‌ನಿಂದ ಬಾಂದ್ರಾ-ವೊರ್ಲಿ ಸೀ ಲಿಂಕ್‌ಗೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿಯ ಯೋಜನೆ ಇದಾಗಿದೆ. 2018ರಲ್ಲಿ ರಸ್ತೆ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ 12,700 ಕೋಟಿ ರೂ. ವ್ಯಯಿಸಲಾಗುತ್ತಿದೆ. ಒಟ್ಟು 10.58 ಕಿಲೋಮೀಟರ್‌ ಉದ್ದದ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇಡೀ ರಸ್ತೆ ಯೋಜನೆಯು ಇದೇ ವರ್ಷದ ಮೇ ತಿಂಗಳಲ್ಲಿ ಮುಗಿಯಲಿದೆ ಎಂದು ಹೇಳಲಾಗುತ್ತಿದೆ. ಮೊದಲ ಹಂತದಲ್ಲಿ, ವೊರ್ಲಿ ಹಾಗೂ ಮರೀನ್‌ ಡ್ರೈವ್‌ ನಡುವಿನ ರಸ್ತೆಗೆ ಚಾಲನೆ ನೀಡಲಾಗುತ್ತಿದೆ.

ದೇಶದ ಮೊದಲ ಸಮುದ್ರದೊಳಗಿನ ಸುರಂಗ ಎಂಬ ದಾಖಲೆ

ಕರಾವಳಿ ರಸ್ತೆ ಯೋಜನೆಯಲ್ಲಿ ಎರಡು ಸಮುದ್ರದೊಳಗಿನ ಸುರಂಗಗಳು ಇವೆ. ಇದರೊಂದಿಗೆ ದೇಶದಲ್ಲಿಯೇ ಮೊದಲ ಬಾರಿಗೆ ಸಮುದ್ರದೊಳಗಿನ ಸುರಂಗ ಹೊಂದಿರುವ ಮೊದಲ ರಸ್ತೆ ಯೋಜನೆ ಎಂಬ ಖ್ಯಾತಿ ಮುಂಬೈ ಕೋಸ್ಟಲ್‌ ಯೋಜನೆಯದ್ದಾಗಿದೆ. ಮುಂಬೈನಿಂದ ವೊರ್ಲಿವರೆಗಿನ ಮೇಲ್ಮೈ ರಸ್ತೆಯು 8 ಲೇನ್‌ಗಳನ್ನು ಹೊಂದಿದೆ. ಸುರಂಗದಲ್ಲಿ ಆರು ಲೇನ್‌ಗಳು ಇರಲಿವೆ. ಬಸ್‌ಗಳು ಸಂಚರಿಸಲೆಂದೇ ರಸ್ತೆಯಲ್ಲಿ ಪ್ರತ್ಯೇಕ ಲೇನ್‌ ಕೂಡ ಇರಲಿದೆ.

ಪ್ರಿಯದರ್ಶಿನಿ ಪಾರ್ಕ್‌ ಹಾಗೂ ಗಿರಗಾಂವ್‌ ಚೌಪಟ್ಟಿ ಮಧ್ಯೆ ಸಮುದ್ರದೊಳಗೆ ಎರಡು ಸುರಂಗಗಳನ್ನು ನಿರ್ಮಿಸಲಾಗಿದೆ. ಪ್ರತಿ ಸುರಂಗವೂ 2.072 ಕಿಲೋಮೀಟರ್‌ ರಸ್ತೆಯನ್ನು ಹೊಂದಿದೆ. ಸುಮಾರು 2.19 ಕಿಲೋಮೀಟರ್‌ ರಸ್ತೆಯನ್ನು ಸೇತುವೆ ಮೇಲೆಯೇ ನಿರ್ಮಿಸಲಾಗಿದೆ. ಇಡೀ ಕಾಮಗಾರಿಯ ಶೇ.84ರಷ್ಟು ಕೆಲಸ ಪೂರ್ಣಗೊಂಡಿದೆ. ಇದೇ ವರ್ಷದ ಮೇ ತಿಂಗಳ ಕೊನೆಯಲ್ಲಿ ಇಡೀ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ದೇಶದ ರಸ್ತೆ ಮೂಲಸೌಕರ್ಯದಲ್ಲಿ ಕ್ರಾಂತಿ

ಕೋಸ್ಟಲ್‌ ರಸ್ತೆ ಯೋಜನೆಯಿಂದ ಮುಂಬೈನಿಂದ ವೊರ್ಲಿಗೆ ತೆರಳುವವರ ಸಮಯ ಉಳಿಯುತ್ತದೆ. ಮೇಲಾಗಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೆಚ್ಚು ಅನುಕೂಲವಾಗಲಿದೆ. ಇನ್ನು, ಈ ರಸ್ತೆ ಮೂಲಕ ತೆರಳುವ ವಾಹನಗಳಿಗೆ ಗರಿಷ್ಠ ಗಂಟೆಗೆ 80 ಕಿ.ಮೀ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ. ಇದೊಂದೇ ಯೋಜನೆಯು ಮುಂಬೈ ನಗರದ ಟ್ರಾನ್ಸ್‌ಪೋರ್ಟೇಷನ್‌ನ ಚಹರೆಯನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version