Site icon Vistara News

UAE Hindu Temple: ಯುಎಇಯಲ್ಲಿ ಮೋದಿ ಇಂದು ಹಿಂದು ದೇಗುಲ ಉದ್ಘಾಟನೆ; ಏನಿದರ ವೈಶಿಷ್ಟ್ಯ?

UAE Hindu Temple

ಅಬುಧಾಬಿ: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೊಂಡ ಬೆನ್ನಲ್ಲೇ ಯುಎಇಯಲ್ಲೂ ಭವ್ಯ ಹಿಂದು ದೇವಾಲಯ (UAE Hindu Temple) ಉದ್ಘಾಟನೆಗೆ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯುಎಇಯಲ್ಲಿ ನಿರ್ಮಿಸಲಾಗಿರುವ ಹಿಂದು ದೇವಾಲಯವನ್ನು ಬುಧವಾರ (ಫೆಬ್ರವರಿ 14) ಉದ್ಘಾಟಿಸಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಮೋದಿ ಅವರು ದೇವಾಲಯವನ್ನು ಉದ್ಘಾಟನೆ ಮಾಡಲಿದ್ದಾರೆ. ಇದಾದ ಬಳಿಕ ಅವರು ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ. ದೇವಾಲಯದ ಉದ್ಘಾಟನೆ ಹಿನ್ನೆಲೆಯಲ್ಲಿ ಈಗಾಗಲೇ ಪ್ರಾಣ ಪ್ರತಿಷ್ಠಾಪನೆ ಸೇರಿ ಹಲವು ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿವೆ.

ರಾಜಸ್ಥಾನ ಶಿಲ್ಪಿಗಳ ಕೊಡುಗೆ

ಅಬುಧಾಬಿಯಲ್ಲಿ ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸಂಸ್ಥಾ (BAPS) ಮಂದಿರವನ್ನು ನಿರ್ಮಿಸಲಾಗಿದ್ದು, ಇದು ಯುಎಇ ಮೊದಲ ಹಿಂದು ದೇವಾಲಯ ಎನಿಸಿದೆ. ರಾಜಸ್ಥಾನದ ಮಕ್ರಾನ ಗ್ರಾಮದ ಶಿಲ್ಪಿಗಳು, ಕುಶಲಕರ್ಮಿಗಳು ಯುಎಇ ಹಿಂದು ದೇವಾಲಯದ ವಾಸ್ತುಶಿಲ್ಪಕ್ಕೆ, ಮೂರ್ತಿಗಳ ಕೆತ್ತನೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕಳೆದ ಐದು ವರ್ಷದಲ್ಲಿ ಇವರು ರಾಮ, ಕೃಷ್ಣನ ಮೂರ್ತಿಗಳು, ದೇವಾಲಯದ ಕಂಬಗಳು, ಶಿಖರಗಳು, ಕಲಾಕೃತಿಗಳನ್ನು ಕೆತ್ತುವ ಮೂಲಕ ದೇವಸ್ಥಾನದ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. 2019ರಲ್ಲಿ ದೇವಾಲಯ ನಿರ್ಮಾಣ ಆರಂಭವಾಗಿದ್ದು, ಇಷ್ಟೂ ವರ್ಷಗಳಲ್ಲಿ ರಾಜಸ್ಥಾನದ ಕಲಾವಿದರು ಅವಿರತವಾಗಿ ಶ್ರಮಿಸಿ, ಶಿಲ್ಪಕಲೆಯ ಮೆರುಗನ್ನು ಹೆಚ್ಚಿಸಿದ್ದಾರೆ.

ರಾಜಸ್ಥಾನದ ಮಾರ್ಬಲ್‌ಗಳು, ಅಮೃತಶಿಲೆ ಹಾಗೂ ಪಿಂಕ್‌ ಸ್ಯಾಂಡ್‌ಸ್ಟೋನ್‌ಗಳನ್ನು ಬಳಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಮೂರ್ತಿ, ಗೋಪುರ, ಕಲಾಕೃತಿಗಳಿಗೂ ಇದೇ ಶಿಲೆಗಳನ್ನು ಬಳಸಲಾಗಿದೆ. ಪ್ರತಿಯೊಂದು ಶಿಖರದ ಕೆತ್ತನೆಯು ರಾಮಾಯಣ, ಶಿವಪುರಾಣ, ಭಾಗವತಂ ಹಾಗೂ ಮಹಾಭಾರತದಿಂದ ಸ್ಫೂರ್ತಿ ಪಡೆದಿದೆ. ರಾಜಸ್ಥಾನದಿಂದ ಅಮೃತಶಿಲೆಗಳು, ಪಿಂಕ್‌ ಸ್ಯಾಂಡ್‌ಸ್ಟೋನ್‌ಗಳನ್ನು ಯುಎಇಗೆ ಕಳುಹಿಸಲಾಗಿದೆ. ದೇವಾಲಯದಲ್ಲಿ ಎರಡು ಶಿಖರ, 12 ಗೋಪುರಗಳಿವೆ. ಎಲ್ಲ ಕಲಾಕೃತಿಗಳ ಹಿಂದೆಯೂ ರಾಜಸ್ಥಾನ ಕಲಾವಿದರ ಕೈಚಳಕವಿದೆ.

ಇದನ್ನೂ ಓದಿ: Burj Khalifa: ಬುರ್ಜ್‌ ಖಲೀಫಾ ಮೇಲೆ ಭಾರತದ ತಿರಂಗಾ; ಮೋದಿ ಭೇಟಿ ಹಿನ್ನೆಲೆ ಗೌರವ

ಹಿಂದು ದೇವಾಲಯ ನಿರ್ಮಾಣದ ಕುರಿತು ಪ್ರಸ್ತಾಪ ಮಾಡಿದ್ದನ್ನು ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ. “2015ರಲ್ಲಿ ನಾನು ಯುಎಇಗೆ ಭೇಟಿ ನೀಡಿದ್ದೆ. ಆಗ, ಹಿಂದೂ ದೇವಾಲಯ ನಿರ್ಮಾಣ ಪ್ರಸ್ತಾಪವನ್ನು ಯುಇಎ ಅಧ್ಯಕ್ಷರ ಮುಂದಿಟ್ಟಾಗ, ಮರುಕ್ಷಣವೇ ಅವರು ಒಪ್ಪಿಗೆ ಸೂಚಿಸಿದರು. ಪರಿಣಾಮ, ಅಬುಧಾಬಿಯ 27 ಎಕರೆ ಭೂಮಿಯಲ್ಲಿ ಈಗ ದೇವಾಲಯ ನಿರ್ಮಾಣವಾಗಿದೆ. ಅದನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಫೆಬ್ರವರಿ 13) ಹೇಳಿದ್ದಾರೆ.

ಉದ್ಘಾಟನೆ ಕಾರ್ಯಕ್ರಮದ ಲೈವ್‌ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ. ಸಂಜೆ 6 ಗಂಟೆಯಿಂದ ಲೈವ್‌ ಆರಂಭವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version