ನವದೆಹಲಿ: ದೇಶದಲ್ಲಿ ವಂದೇ ಭಾರತ್ ರೈಲುಗಳು ಸಂಪರ್ಕ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿದ ಬೆನ್ನಲ್ಲೇ, ಮತ್ತೊಂದು ರೈಲು ಕ್ರಾಂತಿಗೆ ದೇಶ ಸಜ್ಜಾಗಿದೆ. ದೆಹಲಿಯಿಂದ ಘಾಜಿಯಾಬಾದ್, ಮೀರತ್‌ಗೆ ತೆರಳುವ ರ‍್ಯಾಪಿಡ್ ಎಕ್ಸ್ ಯೋಜನೆಯ ಮೊದಲ ಹಂತದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಅಕ್ಟೋಬರ್ 20) ಚಾಲನೆ ನೀಡಲಿದ್ದಾರೆ. ಸಾಹಿಬಾಬಾದ್ ಹಾಗೂ ದುಹೈ ಡಿಪೋ ನಡುವಿನ 17 ಕಿ.ಮೀ ಪ್ರಯಾಣದ ರ‍್ಯಾಪಿಡ್ ಎಕ್ಸ್ (Rapid X Train) ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ.
ಏನಿದು ಆರ್‌ಆರ್‌ಟಿಎಸ್ ಯೋಜನೆ?
ದೆಹಲಿಯಿಂದ ಬೇರೆ ನಗರಗಳಿಗೆ ವೇಗದ ಹಾಗೂ ಅತ್ಯಾಧುನಿಕ ರೈಲು ಸಂಪರ್ಕ ಕಲ್ಪಿಸುವ ಯೋಜನೆಯೇ ಪ್ರಾದೇಶಿಕ ಕ್ಷಿಪ್ರ ಸಾಗಣೆ ವ್ಯವಸ್ಥೆ (RRTS) ಆಗಿದೆ. ಸುಮಾರು 30 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ರ‍್ಯಾಪಿಡ್ ಎಕ್ಸ್ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸಲಿದೆ.
ರೈಲಿನಲ್ಲಿ ಏನೆಲ್ಲ ಇರಲಿವೆ?
ಸ್ಟಾಂಡರ್ಡ್ ಕ್ಲಾಸ್ ಹಾಗೂ ಪ್ರೀಮಿಯಂ ಕ್ಲಾಸ್ ಬೋಗಿಗಳು ಇರಲಿದ್ದು, ಸುಮಾರು 1,700 ಪ್ರಯಾಣಿಕರು ಒಂದು ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ರೈಲಿನಲ್ಲಿ 2×2 ವ್ಯಾಪ್ತಿಯಲ್ಲಿ ಸೀಟುಗಳ ಅಳವಡಿಕೆ, ಟ್ರಾನ್ಸ್‌ವರ್ಸ್ ಸೀಟಿಂಗ್, ಲಗೇಜ್ ರ‍್ಯಾಕ್‌ಗಳು, ಸಿಸಿಟಿವಿ ಕ್ಯಾಮೆರಾಗಳು, ರೂಟ್ ಮ್ಯಾಪ್, ಆಟೋ ಕಂಟ್ರೋಲ್ ಆಂಬಿಯನ್ಸ್, ಹೀಟಿಂಗ್ ವೆಂಟಿಲೇಷನ್ ಸೇರಿ ಹಲವು ಸೌಲಭ್ಯಗಳಿವೆ. ಅಂಗವಿಕರಿಗೆ ಸ್ಟ್ರೆಚರ್‌ಗಳು, ವ್ಹೀಲ್‌ಚೇರ್‌ಗಳು, ಪ್ರತ್ಯೇಕ ಸ್ಪೇಸ್ ಕೂಡ ಬೋಗಿಗಳಲ್ಲಿ ಇವೆ.
ಪ್ರತೀ ಸೀಟ್‌ನಲ್ಲೂ ಹಲವು ಸೌಲಭ್ಯ
ವಿಮಾನಗಳಲ್ಲಿ ಇರುವಂತೆ ಪ್ರತಿಯೊಂದು ಸೀಟ್‌ನಲ್ಲೂ ಹಲವು ಸೌಲಭ್ಯಗಳಿವೆ. ನೀರಿನ ಬಾಟಲಿ ಇಡಲು ಜಾಗ, ಮ್ಯಾಗಜಿನ್ ಹೋಲ್ಡರ್, ಕೋಟ್ ಹ್ಯಾಂಗರ್, ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳು ಪ್ರತಿ ಪ್ಯಾಸೆಂಜರ್‌ಗೆ ಸಿಗಲಿವೆ. ಪ್ರೀಮಿಯಂ ಕೋಚ್‌ಗಳಲ್ಲಿ ತಿಂಡಿ ಹಾಗೂ ಪಾನೀಯಗಳ ವೆಂಡಿಂಗ್ ಮಷೀನ್ ಕೂಡ ಇರಲಿವೆ.
ಹೀಗಿರಲಿದೆ ದರ
ರ‍್ಯಾಪಿಡ್ ಎಕ್ಸ್ ರೈಲುಗಳು ಅತ್ಯಾಧುನಿಕವಾಗಿದ್ದರೂ, ಅತಿ ವೇಗದಲ್ಲಿ ಚಲಿಸಿದರೂ ಟಿಕೆಟ್ ದರ ದುಬಾರಿ ಎನಿಸುವುದಿಲ್ಲ. 72 ಆಸನಗಳ ಸಾಮರ್ಥ್ಯದ ಸ್ಟಾಂಡರ್ಡ್ ಕ್ಲಾಸ್‌ನ ಬೋಗಿಗಳಲ್ಲಿ ಗರಿಷ್ಠ 20 ರೂ.ನಿಂದ 50 ರೂ.ವರೆಗೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಆಯಾ ಸ್ಟೇಷನ್‌ಗಳ ಸ್ಟಾಪ್‌ಗಳಿಗೆ ಅನ್ವಯವಾಗುವಂತೆ ದರ ನಿಗದಿಪಡಿಸಲಾಗಿದೆ. ಇನ್ನು 62 ಆಸನಗಳಿರುವ ಪ್ರೀಮಿಯಂ ಕೋಚ್‌ನಲ್ಲಿ ಚಲಿಸುವವರಿಗೆ ಕನಿಷ್ಠ 40 ರೂ.ನಿಂದ ಗರಿಷ್ಠ 100 ರೂ.ವರೆಗೆ ದರ ನಿಗದಿಪಡಿಸಲಾಗಿದೆ.
ಯೋಜನೆ ಮುಗಿಯುವುದು ಯಾವಾಗ?
ನರೇಂದ್ರ ಮೋದಿ ಅವರು ಮೊದಲ ಹಂತದ ಯೋಜನೆಗೆ ಶುಕ್ರವಾರ ಚಾಲನೆ ನೀಡಲಿದ್ದಾರೆ. ದೆಹಲಿ-ಮೀರತ್ ಆರ್‌ಆರ್‌ಟಿಎಸ್ ಯೋಜನೆಯನ್ನು ರಾಷ್ಟ್ರ ರಾಜಧಾನಿ ಪ್ರಾದೇಶಿಕ ಸಾರಿಗೆ ನಿಗಮ (NCRTC) ಜಾರಿಗೊಳಿಸುತ್ತಿದೆ. ದೆಹಲಿಯಿಂದ ಮೀರತ್‌ವರೆಗೆ ರ‍್ಯಾಪಿಡ್ ಎಕ್ಸ್ ರೈಲು ಸಂಚಾರವು 2025ರ ಜೂನ್‌ನಲ್ಲಿ ಆರಂಭವಾಗಲಿದೆ. ಒಮ್ಮೆ ಯೋಜನೆ ಪೂರ್ತಿಗೊಂಡರೆ ದೆಹಲಿಯಿಂದ ಮೀರತ್‌ಗೆ ಕೇವಲ ಒಂದು ಗಂಟೆಯಲ್ಲಿ ತೆರಳಬಹುದಾಗಿದೆ. ಈಗ ಸುಮಾರು 82 ಕಿ.ಮೀ ಪ್ರಯಾಣಕ್ಕೆ ಮೂರರಿಂದ ನಾಲ್ಕು ಗಂಟೆ ಬೇಕಾಗುತ್ತದೆ.
ಇದನ್ನೂ ಓದಿ: Vande Bharat : ಗಮನಿಸಿ, ಧಾರವಾಡ-ಬೆಂಗಳೂರು ವಂದೇ ಭಾರತ್ ಸಮಯ ಬದಲಾಗಿದೆ, ಈಗ ಅರ್ಧ ಗಂಟೆ ಫಾಸ್ಟ್