ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) 292 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಎನ್‌ಡಿಎ (NDA) ಹಾಗೂ 234 ಕ್ಷೇತ್ರಗಳನ್ನು ಗೆದ್ದ ಇಂಡಿಯಾ ಒಕ್ಕೂಟದ (India Bloc) ಮಧ್ಯೆ ಸರ್ಕಾರ ರಚಿಸಲು ಪೈಪೋಟಿ ಶುರುವಾಗಿದೆ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಸೇರಿ ಹಲವರನ್ನು ಸೆಳೆಯಲು ಇಂಡಿಯಾ ಒಕ್ಕೂಟ (India Bloc) ಪ್ರಯತ್ನಿಸುತ್ತಿದೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಎನ್‌ಡಿಎ ಒಕ್ಕೂಟದ ಹೈಲೆವೆಲ್ ಸಭೆ ನಡೆದಿದೆ. ಇನ್ನು, ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸಲು ಜೆಡಿಯು, ಟಿಡಿಪಿ, ಎಲ್‌ಜೆಪಿ ಸೇರಿ ಮೈತ್ರಿಕೂಟದ ಎಲ್ಲ ಪಕ್ಷಗಳು ಸಮ್ಮತಿ ಸೂಚಿಸಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ನಾಯಕರು ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಯಿತು. ತೆಲುಗುದೇಶಂ ಪಕ್ಷದ (TDP), ಸಂಯುಕ್ತ ಜನತಾದಳದ ನಿತೀಶ್ ಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಆರ್‌ಎಲ್‌ಡಿಯ ಜಯಂತ್ ಚೌಧರಿ, ಜನಸೇನಾ ಪಕ್ಷದ ಪವನ್ ಕಲ್ಯಾಣ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಎಲ್ಲರೂ ಒಗ್ಗೂಡಿ ಸರ್ಕಾರ ರಚಿಸುವುದು, ಒಗ್ಗಟ್ಟಿನಿಂದ ಇರುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.
ನಿತೀಶ್ ಕುಮಾರ್ ಅವರ ಪಕ್ಷವು 16, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯು 12, ಏಕನಾಥ್ ಶಿಂಧೆ ಬಣದ ಶಿವಸೇನೆ 7 ಹಾಗೂ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿಯು 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರಿಂದಾಗಿ, ಎನ್‌ಡಿಎ ಮೈತ್ರಿಕೂಟದ ಸರ್ಕಾರ ರಚನೆಗೆ ಇವರ ಪಾತ್ರವು ನಿರ್ಣಾಯಕವಾಗಿದೆ. ಹಾಗಾಗಿ, ಮೋದಿ ಹಾಗೂ ಅಮಿತ್ ಶಾ ಅವರು ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಿ, ಸರ್ಕಾರ ರಚಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲ ಪಕ್ಷಗಳು ಬೆಂಬಲ ಪತ್ರಗಳನ್ನು ನೀಡಿದ್ದು, ಸರ್ಕಾರ ರಚಿಸಲು ಹಕ್ಕು ಮಂಡಿಸಲಾಗುತ್ತದೆ.
#WATCH | Delhi: TDP chief N Chandrababu Naidu leaves for 7, LKM to attend the NDA meeting pic.twitter.com/1nDTZYVF8A
— ANI (@ANI) June 5, 2024
ಎನ್‌ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಜೆಡಿಯು, ಟಿಡಿಪಿ, ಶಿವಸೇನೆ ಹಾಗೂ ಎಲ್‌ಜೆಪಿ ಪಕ್ಷಗಳ ಪಾತ್ರ ನಿರ್ಣಾಯಕವಾಗಿರುವ ಕಾರಣ ಆಯಾ ಪಕ್ಷಗಳ ನಾಯಕರು ಮಹತ್ವದ ಖಾತೆ, ಹುದ್ದೆ ಸೇರಿ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಕೇಂದ್ರದಲ್ಲಿ ಒಂದು ಖಾತೆಗೆ ಬೇಡಿಕೆ ಇಟ್ಟಿದ್ದು, ಅವರು ಕೃಷಿ ಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: J Shantha: ಅಣ್ಣ-ತಂಗಿಗೆ ಕಹಿ; ಕರ್ನಾಟಕದಲ್ಲಿ ಶ್ರೀರಾಮುಲು, ಆಂಧ್ರದಲ್ಲಿ ಜೆ. ಶಾಂತಾಗೆ ಸೋಲು!