Site icon Vistara News

Modi Egypt Visit: ಈಜಿಪ್ಟ್‌ನಲ್ಲಿ ಸಾವಿರ ವರ್ಷ ಇತಿಹಾಸವಿರುವ ಮಸೀದಿಗೆ ಮೋದಿ ಭೇಟಿ, ಸೌಹಾರ್ದ ಸಂದೇಶ ರವಾನೆ

Narendra Modi To Visit Al Hakim Mosque

PM Narendra Modi to visit 1000-year-old mosque in Egypt, What is the significance?

ಕೈರೋ: ಅಮೆರಿಕ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಎರಡು ದಿನಗಳ ಈಜಿಪ್ಟ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (June 25) ಕೈರೋದಲ್ಲಿರುವ, ಒಂದು ಸಾವಿರ ವರ್ಷಗಳ ಇತಿಹಾಸವಿರುವ (Modi Egypt Visit) ಅಲ್‌-ಹಕೀಮ್‌ ಮಸೀದಿಗೆ ಭೇಟಿ ನೀಡಲಿದ್ದಾರೆ. ಈಜಿಪ್ಟ್‌ನ ನಾಲ್ಕನೇ ಅತಿ ಪುರಾತನ ಹಾಗೂ ಎರಡನೇ ಅತಿ ದೊಡ್ಡ ಮಸೀದಿ ಎನಿಸಿರುವ ಅಲ್‌-ಹಕೀಮ್‌ಗೆ ಮೋದಿ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.

ಅಲ್‌-ಹಕೀಮ್‌ ಮಸೀದಿಗೆ ಮೋದಿ ಅವರು ಭೇಟಿ ನೀಡುತ್ತಿರುವುದು ಭಾರತದಲ್ಲಿರುವ ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ದೃಷ್ಟಿಯಿಂದ ಮಹತ್ವ ಪಡೆದಿದೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾವೂದಿ ಬೋಹ್ರಾ ಮುಸ್ಲಿಮರು ನೆಲೆಸಿದ್ದಾರೆ. ಅಲ್ಲದೆ, ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದವರೊಂದಿಗೆ ಮೋದಿ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಸಮುದಾಯದ ಮುಖಂಡರು ಮೋದಿ ಅವರು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ, ಮೋದಿ ಅವರು ಅಲ್‌-ಹಕೀಮ್‌ ಮಸೀದಿಗೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.

ಹೀಗಿದೆ ನೋಡಿ ಮಸೀದಿ

ಮೋದಿ, ಗುಜರಾತ್ ಮತ್ತು ದಾವೂದಿ ಬೋಹ್ರಾ ಮುಸ್ಲಿಮರು

ನರೇಂದ್ರ ಮೋದಿ ಅವರು ಗುಜರಾತ್‌ನವರಾಗಿದ್ದು, ದಾವೂದಿ ಬೋಹ್ರಾ ಮುಸ್ಲಿಮರು ಗುಜರಾತ್‌ನಲ್ಲಿಯೇ ಹೆಚ್ಚು ವಾಸವಿದ್ದಾರೆ. 11ನೇ ಶತಮಾನದಲ್ಲಿ ದಾವೂದಿ ಬೋಹ್ರಾ ಮುಸ್ಲಿಮರು ಭಾರತಕ್ಕೆ ಬಂದು ನೆಲೆಸಿದರು. ಹಾಗೆಯೇ, ಯೆಮೆನ್‌ನಿಂದ ಹೆಚ್ಚು ದಾವೂದಿ ಬೋಹ್ರಾ ಮುಸ್ಲಿಮರು ಗುಜರಾತ್‌ಗೆ ವಲಸೆ ಬಂದರು. ಇನ್ನು ಮೋದಿ ಹಾಗೂ ದಾವೂದಿ ಬೋಹ್ರಾ ಮುಸ್ಲಿಮರ ಸಂಬಂಧವು ಹತ್ತಾರು ವರ್ಷಗಳಿಂದ ಇದೆ. ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ 2011ರಲ್ಲಿ ದಾವೂದಿ ಬೋಹ್ರಾ ಮುಸ್ಲಿಮರ ಧಾರ್ಮಿಕ ಮುಖಂಡ ಸೈದ್ನಾ ಬುರ್ಹಾನುದ್ದೀನ್‌ ಅವರ ಜನ್ಮ ಶತಮಾನೋತ್ಸವ ಆಚರಣೆಗೆ ಮೋದಿ ಅವರು ಈ ಸಮುದಾಯದ ಮುಖಂಡರನ್ನು ಆಹ್ವಾನಿಸಿದ್ದರು.

ಇದನ್ನೂ ಓದಿ: Modi Egypt Visit: ಈಜಿಪ್ಟ್‌ನಲ್ಲೂ ಅಲೆ, ಮೋದಿಯನ್ನು ಕಂಡು ಮುಗಿಬಿದ್ದ ಭಾರತೀಯರು; ಫೋಟೊಗಳು ವೈರಲ್

ಹಲವು ವಿಶೇಷ ಸಂದರ್ಭಗಳಲ್ಲಿ ಮೋದಿ ಅವರು ದಾವೂದಿ ಬೋಹ್ರಾ ಸಮುದಾಯದ ಮುಖಂಡರ ಆತಿಥ್ಯವನ್ನೂ ಪಡೆದಿದ್ದಾರೆ. ಇನ್ನು, ಮೋದಿ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಅಮೆರಿಕ ಸೇರಿ ವಿವಿಧ ರಾಷ್ಟ್ರಗಳು ಬೊಬ್ಬೆ ಹಾಕುತ್ತಿರುವ ಕಾರಣ ಮೋದಿ ಅವರು ಈಜಿಪ್ಟ್‌ನ ಅಲ್‌-ಹಕೀಮ್‌ ಮಸೀದಿ ಹಾಗೂ ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಮುಖಂಡರನ್ನು ಭೇಟಿಯಾಗುವ ಮೂಲಕ ಜಗತ್ತಿಗೆ ಸೌಹಾರ್ದದ ಸಂದೇಶ ರವಾನಿಸಲಿದ್ದಾರೆ ಎಂದು ತಿಳಿದುಬಂದಿದೆ.

Exit mobile version