Site icon Vistara News

Narendra Modi: ಜನ್ಮದಿನದಂದು ಮೆಟ್ರೋದಲ್ಲಿ ಮೋದಿ ಸಂಚಾರ; ಸಂಸ್ಕೃತದಲ್ಲಿ ಶುಭಕೋರಿದ ಯುವತಿ

Narendra Modi Travels In Metro

PM Narendra Modi Travels In Delhi Metro, Video Goes Viral

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಯಾವುದಾದರೂ ಮೆಟ್ರೋ ಯೋಜನೆಗಳಿಗೆ ಚಾಲನೆ ನೀಡುವುದಿದ್ದರೆ, ಮೆಟ್ರೋ ರೈಲಿನಲ್ಲಿಯೇ ಪ್ರಯಾಣಿಸುತ್ತಾರೆ. ಅಷ್ಟೇ ಅಲ್ಲ, ಮೆಟ್ರೋ ಪ್ರಯಾಣದ ವೇಳೆ ಯುವಕ, ಯುವತಿಯರು ಸೇರಿ ಎಲ್ಲ ಪ್ರಯಾಣಿಕರ ಜತೆ ಮಾತುಕತೆ ನಡೆಸುತ್ತಾರೆ. ಭಾನುವಾರವೂ (ಸೆಪ್ಟೆಂಬರ್‌ 17) ನರೇಂದ್ರ ಮೋದಿ (Narendra Modi) ಅವರು ದೆಹಲಿ ಏರ್‌ಪೋರ್ಟ್‌ ಮೆಟ್ರೋ ಎಕ್ಸ್‌ಪ್ರೆಸ್‌ ಲೈನ್‌ಗೆ ಚಾಲನೆ ನೀಡುವ ಮೊದಲು ಮೋದಿ ಅವರು ದೆಹಲಿ ಮೆಟ್ರೋದಲ್ಲಿ (Delhi Metro) ಸಂಚರಿಸಿದರು.

ದ್ವಾರಕಾ ಸೆಕ್ಟರ್‌ 21ರಿಂದ ಯಶೋಭೂಮಿ ದ್ವಾರಕಾ ಸೆಕ್ಟರ್‌ 25ನೇ ಸ್ಟೇಷನ್‌ಗೆ ವಿಸ್ತರಣೆಯಾಗಿರುವ ದೆಹಲಿ ಏರ್‌ಪೋರ್ಟ್‌ ಮೆಟ್ರೋ ಎಕ್ಸ್‌ಪ್ರೆಸ್‌ ಲೈನ್‌ಗೆ ಮೋದಿ ಚಾಲನೆ ನೀಡಿದರು. ಇದಕ್ಕೂ ಮೊದಲು ಅವರು ಮೆಟ್ರೋದಲ್ಲಿ ಪ್ರಯಾಣಿಸಿದರು. ಪ್ರಯಾಣದ ವೇಳೆ ಮೋದಿ ಅವರು ಹಿರಿಯರು, ಮಕ್ಕಳು, ಯುವಕ, ಯುವತಿಯರ ಜತೆ ಮಾತುಕತೆ ನಡೆಸಿದರು. ಯುವತಿಯರಂತೂ ಮೋದಿ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಜನ್ಮದಿನದ ಖುಷಿಯಲ್ಲಿರುವ ಮೋದಿ ಅವರೂ ಸೆಲ್ಫಿಗೆ ಪೋಸ್‌ ನೀಡಿದರು. ಇದೇ ವೇಳೆ ಯುವತಿಯೊಬ್ಬಳು ಮೋದಿ ಅವರಿಗೆ ಸಂಸ್ಕೃತದಲ್ಲಿ ಜನ್ಮದಿನದ ಶುಭಕೋರಿದ್ದು ವಿಶೇಷವಾಗಿತ್ತು.

ಮೆಟ್ರೋ ಉದ್ಯೋಗಿಗಳ ಜತೆಗೂ ಮಾತುಕತೆ

ದೆಹಲಿ ಏರ್‌ಪೋರ್ಟ್‌ ಮೆಟ್ರೋ ಎಕ್ಸ್‌ಪ್ರೆಸ್‌ ಲೈನ್‌ಗೆ ಚಾಲನೆ ನೀಡಿದ ಬಳಿಕ ನರೇಂದ್ರ ಮೋದಿ ಅವರು ದೆಹಲಿ ಮೆಟ್ರೋ ಸಹೋದ್ಯೋಗಿಗಳು, ಕಾರ್ಮಿಕರ ಜತೆಗೂ ಮಾತುಕತೆ ನಡೆಸಿದರು. ಮೆಟ್ರೋ ಕಾಮಗಾರಿ, ಅವರ ಕೆಲಸದ ಅವಧಿ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದರು ಎಂದು ತಿಳಿದುಬಂದಿದೆ.

ಅಷ್ಟೇ ಅಲ್ಲ, ದ್ವಾರಕಾದಲ್ಲಿರುವ, ಯಶೋಭೂಮಿ ಎಂದೇ ಖ್ಯಾತಿಯಾಗಿರುವ ಇಂಡಿಯಾ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಆ್ಯಂಡ್‌ ಎಕ್ಸ್‌ಪೋ ಸೆಂಟರ್‌ಅನ್ನು (IICC) ಲೋಕಾರ್ಪಣೆಗೊಳಿಸಿದರು. ಇದೇ ಸಮಯದಲ್ಲಿ ಅವರು ಕಲಾವಿದರು ಹಾಗೂ ಕರಕುಶಲಕರ್ಮಿಗಳ ಯೋಗಕ್ಷೇಮ ವಿಚಾರಿಸಿದರು.

ಇದನ್ನೂ ಓದಿ: PM Modi Birthday: ದಿರಸಿನಿಂದಲೇ ಮೋಡಿ ಮಾಡುತ್ತಾರೆ ಮೋದಿ… ಇಲ್ಲಿವೆ ಅವರ ಸ್ಪೆಷಲ್‌ ಲುಕ್‌ಗಳು

ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಅಮಿತ್‌ ಶಾ, ಕ್ರಿಕೆಟಿಗ ಚೇತೇಶ್ವರ ಪೂಜಾರ ಸೇರಿ ಹಲವು ಗಣ್ಯರು ಶುಭಕೋರಿದ್ದಾರೆ. ದೇಶಾದ್ಯಂತ ಸೇವಾ ಕಾರ್ಯಕ್ರಮಗಳ ಮೂಲಕ ಬಿಜೆಪಿಯು ಮೋದಿ ಜನ್ಮದಿನವನ್ನು ಆಚರಿಸುತ್ತಿದೆ.

Exit mobile version