Site icon Vistara News

PM Narendra Modi: ʼʼ…ಪ್ರತಿಪಕ್ಷದವರೂ ಅಲ್ಲಿದ್ದರು..ʼʼ ಎಂದ ಪ್ರಧಾನಿ; ವಿದೇಶ ಪ್ರವಾಸದಿಂದ ಮರಳಿದ ಮೋದಿಗೆ ಅದ್ಧೂರಿ ಸ್ವಾಗತ

modi

ಹೊಸ ದಿಲ್ಲಿ: ಆಸ್ಟ್ರೇಲಿಯಾದಲ್ಲಿ ಪ್ರತಿಪಕ್ಷಗಳ ನಾಯಕರೂ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಹೇಳುವ ಮೂಲಕ, ನೂತನ ಸಂಸತ್‌ ಭವನ ಉದ್ಘಾಟನೆಯನ್ನು ಬಹಿಷ್ಕರಿಸಿರುವ ಪ್ರತಿಪಕ್ಷಗಳ ನಡೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಟಾಂಗ್‌ ನೀಡಿದ್ದಾರೆ.

ಜಪಾನ್‌, ಪಪುವಾ ನ್ಯೂಗಿನಿ ಹಾಗೂ ಆಸ್ಟ್ರೇಲಿಯಾ ಈ ಮೂರು ದೇಶಗಳ ಪ್ರವಾಸದ ಬಳಿಕ ಇಂದು ಪ್ರಧಾನಿ ಮೋದಿ ಭಾರತಕ್ಕೆ ಹಿಂದಿರುಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಪಕ್ಷಗಳ ಮೇಲೆ ಪರೋಕ್ಷ ಮಾತಿನ ಬಾಣವನ್ನು ಎಸೆದರು.

ʼʼಸಿಡ್ನಿಯಲ್ಲಿ ನಡೆದ ಭಾರತೀಯ ಡಯಾಸ್ಪೊರಾದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ, ಸಂಸದರು ಮಾತ್ರವಲ್ಲ, ಅಲ್ಲಿನ ಮಾಜಿ ಪ್ರಧಾನಿ, ಪ್ರತಿಪಕ್ಷಗಳ ಸಂಸದರು ಕೂಡ ಭಾಗವಹಿಸಿದ್ದರು. ಇದು ಪ್ರಜಾಪ್ರಭುತ್ವದ ನೈಜ ಶಕ್ತಿ. ಅವರೆಲ್ಲರೂ ಒಟ್ಟಾಗಿ ಭಾರತೀಯ ಅನಿವಾಸಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡರುʼʼ ಎಂದು ನರೇಂದ್ರ ಮೋದಿ, ಈ ಸಂದರ್ಭದಲ್ಲಿ ನೆರೆದವರನ್ನು ಉದ್ದೇಶಿಸಿ ಹೇಳಿದರು.

ಭಾನುವಾರ ನೂತನ ಸಂಸತ್‌ ಭವನದ ಉದ್ಘಾಟನೆಯನ್ನು ಪ್ರಧಾನಿ ಮೋದಿ ಹಾಗೂ ಸ್ಪೀಕರ್‌ ಓಂ ಬಿರ್ಲಾ ನೆರವೇರಿಸಲಿದ್ದಾರೆ. ಆದರೆ ರಾಷ್ಟ್ರಪತಿಗಳಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು 19 ಪ್ರತಿಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಈ ಬಹಿಷ್ಕಾರ ಘೋಷಣೆಯ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಹೇಳಿಕೆ ಬಂದಿದೆ.

ಪ್ರಧಾನಿಗೆ ಅದ್ಧೂರಿ ಸ್ವಾಗತ

ಮೂರು ದೇಶಗಳ ಪ್ರವಾಸ ಮುಗಿಸಿದ ಪ್ರಧಾನಿ ಇಂದು ದೆಹಲಿಯ ಪಾಲಂ ಏರ್‌ಪೋರ್ಟ್‌ನಲ್ಲಿ ಬಂದಿಳಿದರು. ಹಲವು ವಿಶೇಷಗಳಿಂದ ಕೂಡಿದ್ದ ಈ ಪ್ರವಾಸ ಮುಗಿಸಿ ಬಂದ ಅವರಿಗೆ ಅದ್ಧೂರಿಯ ಸ್ವಾಗತ ಕೋರಲಾಯಿತು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಸಚಿವರಾದ ಮೀನಾಕ್ಷಿ ಲೇಖಿ, ಹರ್ಷವರ್ಧನ್‌ ಸ್ಥಳದಲ್ಲಿದ್ದರು. ಸ್ವಾಗತದ ಬಳಿಕ ಅವರು ಸುದ್ದಿಸಂಸ್ಥೆ ಎಎನ್‌ಐಗೆ ಪ್ರವಾಸದ ವಿವರ ನೀಡಿದರು.

ಈ ದೇಶಗಳ ಪ್ರವಾಸದ ಸಂದರ್ಭದಲ್ಲಿ, ಜಪಾನಿನ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪುತ್ಥಳಿಯನ್ನು ಮೋದಿ ಲೋಕಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆದ ಭಾರತೀಯ ಡಯಾಸ್ಪೊರಾ ಕಾರ್ಯಕ್ರಮದಲ್ಲಿ ಸಾವಿರಾರು ಅನಿವಾಸಿ ಭಾರತೀಯರು ಆಗಮಿಸಿದ್ದರು. ಅಲ್ಲಿ ಭಾಗವಹಿಸಿದ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್‌, ಮೋದಿಯನ್ನು ʼದಿ ಬಾಸ್‌ʼ ಎಂದಿದ್ದರಲ್ಲದೆ, ಮೋದಿಯವರ ಜನಪ್ರಿಯತೆಯನ್ನು ಮೆಚ್ಚಿಕೊಂಡಿದ್ದರು. ಪಪುವಾ ನ್ಯೂಗಿನಿಯಲ್ಲಿ ಅಲ್ಲಿನ ಪ್ರಧಾನಿ ಜೇಮ್ಸ್‌ ಮರಾಪೆ ಅವರು ಮೋದಿ ಕಾಲಿಗೆ ನಮಸ್ಕರಿಸಿದ್ದು ಸಹ ಸುದ್ದಿಯಾಗಿತ್ತು. ಈ ಪ್ರವಾಸದಲ್ಲಿ ಹಲವು ದೇಶಗಳ ಮುಖ್ಯಸ್ಥರ ಜತೆ ಅವರು ಮಹತ್ವದ ದ್ವಿಪಕ್ಷೀಯ ಮಾತುಕತೆಗಳಿಗೆ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ: PM Narendra Modi: ಮೋದಿ ಭೇಟಿ ಹಿನ್ನೆಲೆಯಲ್ಲಿ ತಿರಂಗಾ ಬಣ್ಣಗಳಲ್ಲಿ ಮಿನುಗಿದ ಸಿಡ್ನಿ ಹಾರ್ಬರ್, ಓಪೇರಾ ಹೌಸ್!

Exit mobile version