Site icon Vistara News

Narendra Modi: ಅಮೇಥಿಯಂತೆ ವಯನಾಡಿನಲ್ಲೂ ರಾಹುಲ್‌ ಗಾಂಧಿಗೆ ಸೋಲು; ಮೋದಿ ಭವಿಷ್ಯ!

pm Narendra Modi

ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. “ಏಪ್ರಿಲ್‌ 26ರಂದು ವಯನಾಡಿನಲ್ಲಿ ಮತದಾನ ನಡೆಯುತ್ತಿದ್ದು, ಕಾಂಗ್ರೆಸ್‌ ಕುತೂಹಲದಿಂದ ಕಾಯುತ್ತಿದೆ. ಕಾಂಗ್ರೆಸ್‌ನ ಮಹಾರಾಜ (ಶೆಹ್ಜಾದ) ಹೇಗೆ ಅಮೇಥಿಯಿಂದ ಓಡಿದರೋ, ವಯನಾಡಿನಲ್ಲೂ (Wayanad) ಅವರು ಓಡುತ್ತಾರೆ” ಎಂದು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಕುಟುಕಿದ್ದಾರೆ.

“ವಯನಾಡಿನಲ್ಲಿ ಕಾಂಗ್ರೆಸ್‌ ಬಿಕ್ಕಟ್ಟು ಎದುರಿಸುತ್ತಿದೆ. ಕಾಂಗ್ರೆಸ್‌ನ ಮಹಾರಾಜ ಹಾಗೂ ಅವರ ಆಪ್ತರು ಮತದಾನಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಅಮೇಥಿಯಲ್ಲಿ ಅವರು ಓಡಿದಂತೆ, ವಯನಾಡಿನಿಂದಲೂ ಓಡಿಹೋಗುತ್ತಾರೆ. ಇದನ್ನು ನೀವು ಸುಲಭವಾಗಿ ಊಹಿಸಬಹುದು. ಚುನಾವಣೆಯ ಬಳಿಕ ರಾಹುಲ್‌ ಗಾಂಧಿ ಅವರಿಗೆ ಕಾಂಗ್ರೆಸ್‌ ಮತ್ತೊಂದು ಸುರಕ್ಷಿತ ಕ್ಷೇತ್ರವನ್ನು ಹುಡುಕಬೇಕಾಗುತ್ತದೆ” ಎಂದು ಛೇಡಿಸಿದರು.

ಇಂಡಿಯಾ ಒಕ್ಕೂಟಕ್ಕೂ ಟಾಂಗ್‌

“ಕಾಂಗ್ರೆಸ್‌ ಮಾತ್ರವಲ್ಲ ಇಂಡಿಯಾ ಒಕ್ಕೂಟದಲ್ಲೂ ಭಾರಿ ಬಿಕ್ಕಟ್ಟು ಉಂಟಾಗಿದೆ. ಇದೇ ಕಾರಣಕ್ಕಾಗಿ ಇಂಡಿಯಾ ಒಕ್ಕೂಟದಿಂದ ಒಬ್ಬ ನಾಯಕನನ್ನು ಆಯ್ಕೆ ಮಾಡಲು ಆಗಲಿಲ್ಲ. ಆ ಮೂಲಕ ನಮ್ಮ ನಾಯಕ ಇವರು ಎಂಬುದಾಗಿ ದೇಶದ ಜನರಿಗೆ ತಿಳಿಸಲು ಆಗಲಿಲ್ಲ. ಏಕೆಂದರೆ, ಇಂಡಿಯಾ ಒಕ್ಕೂಟದ ನಾಯಕರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಚುನಾವಣೆ ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್‌ ಕೂಡ ಸೋಲನ್ನು ಒಪ್ಪಿಕೊಂಡಿದೆ” ಎಂಬುದಾಗಿ ವಾಗ್ದಾಳಿ ನಡೆಸಿದರು.

“ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ. ಹಾಗಾಗಿ, ಬೇರೆ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸುವುದರಲ್ಲಿ ಯಾವುದೇ ಉಪಯೋಗವಿಲ್ಲ. ಹಾಗಾಗಿ, ನೀವು ಪಕ್ಷಗಳ ಪರವಾಗಿ ಕೆಲಸ ಮಾಡುವ ಬದಲು, ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸ ಮಾಡಿ. ಆಗ, ಇಂದಲ್ಲ, ನಾಳೆ ನಿಮಗೂ ಒಂದು ಸಮಯ, ಅವಕಾಶ ಬರುತ್ತದೆ” ಎಂದು ಪರೋಕ್ಷವಾಗಿ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ” ಎಂದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಹಾಗೂ ವಯನಾಡಿನಲ್ಲಿ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ಅಮೇಥಿಯಲ್ಲಿ ಕಾಂಗ್ರೆಸ್‌ ಇದುವರೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.

ಇದನ್ನೂ ಓದಿ: Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Exit mobile version